ಸೋಮವಾರ, ಅಕ್ಟೋಬರ್ 26, 2009

ಏನು ತಿಳಿಯದಿರಲು...

ಈ ತಿಂಗಳು ಹೆಚ್ಚಾಗಿ ಏನು ಬರೆಯಲಾಗಲಿಲ್ಲ!!
ಮನಸ್ಸಿನಲ್ಲಿ ನೂರಾರು ಹೊಸ ಭಾವನೆಗಳು, ಹಲವು ಒಳ್ಳೆಯವು.. ಕೆಲವು ಬೇಸರ ತರಿಸುವಂಥದ್ದು..

ಈ ಕ್ಷಣಿಕ ಭಾವನೆಗಳ ಎಲ್ಲಿ ಹಿಡಿದಿದಲಿ?
ನೋವು ಮರೆಯಲು, ನಲಿವು ಹರಿಯಲು
ಬೇರೇನೂ ತಿಳಿಯದಿರಲು...

ಈ photo'ಗಳ ಕ್ಲಿಕ್ಕ್ಕಿಸಿದ್ದಿನಿ.... ಹೇಗಿದೆ ಹೇಳಿ :)

















ಕೊಂಡಿ: http://picasaweb.google.co.in/usha.j4me/SANYASIMOOLE?authkey=Gv1sRgCL-Qn7PmsdriUQ#

ಗುರುವಾರ, ಅಕ್ಟೋಬರ್ 15, 2009

ಏನೇನೋ ಬರೆದೆ...

೧)

ಬಾನ ಚುಕ್ಕಿ ತಂದೆ ಹೆಕ್ಕಿ, ಅಂಗಳದಲಿ ರಂಗವಲ್ಲಿ
ಬಾಗಿಲಿಗೆ ತೋರಣ, ಮಾಡಿಹೆ ಎಲ್ಲ ಓರಣ,
ಬೀದಿ ಬಾಗಿಲಲ್ಲಿ ನಿಂತೆ, ನೀನು ಬರದೆ ತಂದೆ ಚಿಂತೆ.

ನಿದಿರೆ ಬರಲು ಮಲಗೆ ನಾನು, ಎದುರು ಬಂದು ನಿಂತೆ ನೀನು
ನಿನ್ನಿಂದ ಮನೆಯೆಲ್ಲ ಸಂಭ್ರಮ, ನನ್ನ ಹಾಡಿನಲ್ಲಿ ತಂದೆ ಸ ರಿ ಗ ಮ
ನೀನು ಜೊತೆಯಾಗಿರಲು ಬಾಳೆಲ್ಲ ಮಧುರಿಮ.

೨)

ಮಳೆಯ ಹನಿಯ ಮುತ್ತಿನಂತೆ, ನನ್ನ ಮೂಗ ನತ್ತಿನಂತೆ, ಹೊಸ ಬೆಳೆಯ ಬಿತ್ತಿದಂತೆ, ಚಿಗುರಿದ ಕನಸು ಮೊಳಕೆಯೊಡೆಯಲೆತ್ನಿಸಿದೆ

ಏನಿತ್ತು ಆ ಇಪ್ಪತ್ನಾಕರಲ್ಲಿ?? ಎಂದು ಕೇಳಲು ನೀನು.
ನಾಚಿ ನೀರಾಗಿ.. ಕೆನ್ನೆ ಕೆಂಪಾಗಿ, ಒಡಲು ತಂಪಾಗಿ ನಾನು.

ಇಷ್ಟು ವರುಷ ಕಾದರೂ ಸಿಗದ ನಗುವ ಕೊಟ್ಟಿತೀ ಇಪ್ಪತ್ತನಾಲ್ಕು..
ವರುಷ ನಿಮಿಷವಾಯಿತು, ಮನಸು ಎಲ್ಲೋ ಹಾರಿತು. :)

ಬುಧವಾರ, ಸೆಪ್ಟೆಂಬರ್ 16, 2009

ಇದೂ ನಿನ್ನದೇ ಬುತ್ತಿ...

ಹೊರಗೆ ಜೋರು ಮಳೆ, ಸುತ್ತಲೂ ಕಗ್ಗತ್ತಲು
ಗುರುತಿರದ ಸೂರು, ಗುರಿಯಿರದ ಹಾದಿ, ಬತ್ತದ ದಾಹದಲಿ, ಎತ್ತಣದ ಹೆಜ್ಜೆ??

ಒಂದು ದಿನದ ನಲಿವಿಗೆ ನೂರು ನೋವಿನ ಸುಂಕ,
ನಾವ್ ಕೆಳ ಬಿದ್ದರೆ, ತಾವೇ ಗೆದ್ದೆವೆಂದು ಕುಣಿವುದೀ ಲೋಕ, ಇದಕ್ಕೆನೋ ಬಿಂಕ.

ಕನಸು ಬೀಳುವ ಗಾಢ ನಿದಿರೆಯಲೂ ಕಾಣದ ದುಗುಡ,
ಹಗಲೆಲ್ಲ ಓಡಾಟ, ಕಣ್ಕುಕ್ಕುವ ಕಾರ್ಮೋಡಗಳ ಹಿಂದೆ ಎಲ್ಲವೂ ನಿಗೂಢ.

ಉಸಿರು ಕಟ್ಟಿದೆ, ಕಾಣದಾಗಿದೆ ಸಣ್ಣದೊಂದು ಬೀದಿ,
ಬೆಳಕು ಮರೀಚಿಕೆ...ಮೌಢ್ಯತೆಯಲಿ ಮಾಡಿದ ತಪ್ಪುಗಳಿಂದ ಅಳಿದು ಬಿದ್ದಿದೆ ಭರವಸೆಯ ಬುನಾದಿ.

ಎಲ್ಲ ಬಲ್ಲವ, ನಮ್ಮನಾಳುವವ, ಬರೆದಿಟ್ಟಿರುವನಂತೆ ಮೊದಲೇ ನಮ್ಮ ಬಾಳ ಪರಮ ಪದವ,
ಇದೆಲ್ಲ ನಿನ್ನದೇ "ಬುತ್ತಿ"...!!!
ನಿನ್ನ ಜನ್ಮ, ಪೂರ್ವ ಕರ್ಮ, ಕಳೆದ ಮೇಲೆ ನಿವೃತ್ತಿ.

ಶನಿವಾರ, ಸೆಪ್ಟೆಂಬರ್ 12, 2009

ಹೀಗೊಂದು ಪ್ರೇಮ ಕಥೆ (ಕವಿತೆ)

ನಮ್ಮ ಸ್ನೇಹಿತರೊಬ್ರು ಪ್ರೀತಿಲಿ ಬಿದ್ದಿದ್ದಾರೆ... ಈಗ ತಾನೆ ಅವರ ಹತ್ರ ಮಾತಾಡೋವಾಗ ಯಾರವಳು ಅಂತ ಕೇಳಿದ್ದಕ್ಕೆ.. ನನ್ನ ಮತ್ತು ಅವರ ಸಂಭಾಷಣೆ ಹೀಗಿತ್ತು...

ನಾನು: ಮೋಡಿ ಮಾಡಿದ ಹುಡುಗಿಯು ಹಗಲಿರುಳು ಬಂದು ಕಾದಿಹಳು ಕೃಷ್ಣನ ಮನಸ್ಸನ್ನು,
ಕನಸು ಮನಸುಗಳನ್ನು ತುಂಬಿ ಪ್ರತಿ ಮಿಡಿತದಲ್ಲೂ ಬಡಿದು ನಿಮ್ಮ ಮನ ತುಂಬಿದ ಚೆಲುವೆ, ಅವಳ್ಯಾರು?

ಸ್ನೇಹಿತ: ನನ್ನ ಮನದಲ್ಲಿ ಅಚ್ಚೊತ್ತಿದ ಹೃದಯ ಸಿಂಹಾಸನದಲಿ ನೆಲೆಸಿದ ಆ ಛಾಯಾಚಿತ್ರ ನಾ ಹೇಗೆ ತೋರಿಸಲಿ?
ಆ ಚಿತ್ರ ಬಿಡಿಸಲು ನಾ ಕಲಾವಿದನಲ್ಲ, ವರ್ಣಿಸಲು ಕವಿಯಲ್ಲ
ಮುಚ್ಚಿಟ್ಟು ಕೊಂಡಿರುವೆ ಆ ಮಂದಹಾಸವ ನನ್ನಲ್ಲೇ.
ಬೇರೇನ ಹೇಳಲಿ?? ಒಲಿದು ಬಂದರೆ ಅವಳೇ ನನ್ನ ನಲ್ಲೆ
ಇಲ್ಲದಿದ್ದರೆ ಉಳಿದು ಹೋಗಲಿ ಈ ಮಧುರ ಭಾವವೆಲ್ಲ ನನ್ನಲ್ಲೇ!!!!

ನನ್ನ ಸ್ನೇಹಿತರಿಗೆ All the Best ಹೇಳಲೇ ಬೇಕಲ್ವೆ???

ಶನಿವಾರ, ಆಗಸ್ಟ್ 8, 2009

ಹನಿಗವನ 2

೧)

ಕಾಡುವ ಮನಸಿನ ಕಿವಿ ಮಾತುಗಳು
ಮುಗಿಯದ ನಿರೀಕ್ಷೆಯ ಕಣ್ಣೋಟಗಳು
ಕಾಯಬೇಕು ಕ್ಷಣವೂ ಎಲ್ಲದಕೂ
ಮರೆಯದಿರು, ಇದೇ ನನ್ನ ನಿನ್ನ ಬದುಕು...


೨)

कभी ऐसा लगता है की ज़िन्दगी ख़तम सी होगई हो
आंखरी दिन गिन रही हु

दुनिया के किसी भी कोने में जाके आंसू बहालू तुम्हारी नाम की ,
इतना दर्द भरा है दिल में, जैसे हसना भूल गई हु!!

ಬುಧವಾರ, ಆಗಸ್ಟ್ 5, 2009

ಸ್ನೇಹವೆಂಬ ಬಳ್ಳಿ

ಮೊನ್ನೆ ಸ್ನೇಹಿತರ ದಿನಾಚರಣೆ ಆದಾಗಿನಿಂದ ಏನೇನೋ ಯೋಚನೆಗಳು ಬಂದು ಕಾಡುತ್ತಾ ಇದೆ.

ಯಾಕೆ ನಮ್ಮ ಹಳೆ ಸ್ನೇಹಿತರು ನಮ್ಮನ್ನ ಮರೀತಾರೆ?? ನಾವೇ ಅವ್ರನ್ನ ಮರ್ತಿದ್ದೀವಾ?? ಒಟ್ನಲ್ಲಿ ನಮ್ಮ busy ಮತ್ತು practicle life ನಮ್ಮ ಸ್ನೇಹಿತ ಸ್ನೇಹಿತೆರನ್ನ ನಮ್ಮಿಂದ ದೂರವಾಗಿಸಿದೆ. ಹೀಗೆಲ್ಲ ಏನೇನೋ ಸಾಂಧರ್ಭಿಕ ಯೋಚನೆಗಳು ಬಂದಾಗ ನನ್ನ ಈಗಿನ ಗೆಳೆಯ ಗೆಳತಿಯರ ಬಗ್ಗೆ ನಂಗೆ ತುಂಬ ಹೆಮ್ಮೆ ಇದೆ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವರದ್ದೇ ಆದ ವಿಶಿಷ್ಟ ಗುಣಗಳನ್ನ ಹೊಂದಿ ನನ್ನ ಜೀವನದಲ್ಲಿ ಅವರ ಗುಣದ ಕಂಪನ್ನು ಬೀರ್ತಾ ನನ್ನ ಮೇಲೆ ಪ್ರಭಾವ ಬೀರ್ತಾ ಇದ್ದಾರೆ.

ಒಬ್ಬರು ಬುದ್ದಿವಂತರಾದರೆ, ಇನ್ನೊಬ್ರು ಹಾಡ್ತಾರೆ, ಮತ್ತೊಬ್ರು english expert, ಮತ್ತೊಬ್ರಿಗೆ ಕನ್ನಡ ಭಾಷಾಭಿಮಾನ, ಮಗೊದೊಬ್ರು ಅಡುಗೆ ಪ್ರವೀಣರು, ಚೆನ್ನಾಗಿ ಮಾತಾಡೋರು, moral support ಕೊಡೋರು, ಹೀಗೆ ಹಲವಾರು ಗೆಳೆತನದ ಕೊಂಡಿಗಳು ನನ್ನ ಆಕರ್ಶಿಸಿದೆ. ಇದ್ರಲ್ಲಿ ನಾವು ಕೊಟ್ಟು ತೊಗೋಳೋದು ಬರೀ ಸ್ನಹ ಮಾತ್ರ ಅಂತ ಅನ್ಕೊಂಡಾಗ ನಾನೇ ಪುಣ್ಯವಂತೆ ಅಂತಲೂ ಅನ್ನಿಸುತ್ತೆ. ಪ್ರತಿ ವರ್ಷವೂ ಅದೇ ಋತುಗಳು ಮರುಕಳಿಸಿದರೂ, ಅವುಗಳು ಕೊಡುವ ಅನುಭವ ಪ್ರತಿ ಬಾರಿಯೂ ಬೇರೇನೆ ಅಲ್ವಾ?? ನನ್ನ ಬಿಟ್ಟು ಹೋದ, ನನ್ನೊಟ್ಟಿಗೆ ಇರುವ ಎಲ್ಲ ಗೆಳೆಯ ಗೆಳತಿಯರಿಗೆ ನನ್ನ ಧನ್ಯವಾದಗಳು, ನನ್ನ ತಮ್ಮ ಗೆಳೆತಿಯಾಗಿ ಮಾಡಿಕೊಂಡಿದ್ದಕ್ಕೆ.

ಅವರಿಗಾಗಿ ಈ ಸಾಲುಗಳನ್ನು ಬರ್ದಿದ್ದೀನಿ, ಓದಿ ಹೇಗಿದೆ ಅಂತ ಹೇಳ್ತೀರಾ??

ಬಾಳೆಂಬ ಸಸಿ, ಚಿಗುರೊಡೆದು,
ಸ್ನೇಹವೆಂಬ ಬಳ್ಳಿಯು ಎಲ್ಲೆಲ್ಲೂ ಹರಡಿ,
ಹೊಸ ಹೂಗಳ ನೀಡಿದೆ.

ಉದುರಿದ ತರು ಲತೆಗಳಿಂದ ಮನಕೆ ನೋವು.
ದಿನವೂ ಮೊಳಕೆಯೊಡೆಯುವ ಹೊಸ ಚಿಗುರು.
ಮರವೆಲ್ಲ ಕಂಪು, ಕಣ್ಣಿಗೆ ತಂಪು.

ಗ್ರೀಷ್ಮದ ಗಾಳಿ ತೀಡಿ, ಕಿಡಿ ಧೂಳನು ಹರಡಿದರೂ,
ವರ್ಷವು ಮನದೆಲ್ಲ ಕೊಳಕುಗಳ ತೊಳೆದು ಹಸಿರಾಗಿಸಿದೆ,
ಕಾಯುತಿದೆ ಮತ್ತೆ ವಸಂತಕೆ, ಎದುರು ನೋಡುತಿದೆ ನವ ಸಂತಸಕೆ.

ಭಾನುವಾರ, ಆಗಸ್ಟ್ 2, 2009

ಮರೆತೆ ನೀ ನಮ್ಮ ಗೆಳೆತನ

ಮರೆತೆ ನೀ ನಮ್ಮ ಗೆಳೆತನ,
ಗೆಳೆಯನೆ ನೀನು ಬರೀ ಗೆಳೆಯನಾಗಿರಲಿಲ್ಲ,
ಬಂಧು, ಬಳಗ, ಗುರು, ಹಿತೈಷಿ, ತಂದೆ ತಾಯಿಯರ ಎಲ್ಲ ಪಾತ್ರ ವಹಿಸಿದ್ದೆ
ನನ್ನೆಲ್ಲ ತುಂಟಾಟ, ಆಟ, ಪಾಠಗಳ ಸಹಿಸಿದ್ದೆ.

ಅನುದಿನವು ನಿನ್ನ ನೆನಪೇ ಕಾಡುತಲಿಹುದು ಹಗಲಿರುಳು
ಯಾರ ನಂಜು ಬಿತ್ತೋ ನಮ್ಮ ಸ್ನೇಹಕ್ಕೆ ಎಂದು ಚಿಂತಿಸಿ ಬೇಸತ್ತೆ
ನಮ್ಮ ಸ್ನೇಹದ ಬುತ್ತಿಯಲ್ಲಿ ಇಷ್ಟೇ ಉಣಬೇಕೆಂದು ಬರೆದಿತ್ತೋ ಏನೋ
ಅದಕೇ ಮರೆತೆ ನೀ ನಮ್ಮ ಗೆಳೆತನ.

ಸ್ನೇಹ ದಿನಾಚರಣೆಯಂದು ನಮ್ಮ ಸ್ನೇಹವ ಮರೆತ ನನ್ನ ಗೆಳೆಯನಿಗೆ ಇದು ತಲುಪಲಿ!!

ಇಂತಿ,
ನಿನ್ನ ಗೆಳತಿ
ಉಷಾ

ಶುಕ್ರವಾರ, ಜುಲೈ 31, 2009

ಮನಸ್ಸಿಗೆ ಬಂದದ್ದು...

  1. ಮಾತಿನ ಚಾಟಿಯ ಬೀಸಿ,
    ಬರಿಯ
    ನೋಟದಲೆ ಎದೆ ಬಿರಿದು,
    ಸುಡುತಲಿಹುದು ಒಡಲ ಕಡಲು,
    ಮನೆ ಒಡಕಲು, ಮನ ಬಡಕಲು,
    ಎಲ್ಲೆಲ್ಲೂ ಇಣುಕಲು, ಕಂಡಿರುವುದೊಂದು ಸಣ್ಣ ಗಿಳಬಾಗಿಲು (ಕಿಟಕಿ),
    ಬರುವುದೇ ನಮ್ಮ ಬಾಳಲೂ ಉಜ್ಜ್ವಲ ಹಗಲು??

  2. ನಿನ್ನೀ ಒಡನಾಟ, ಸುಂದರ ನೋಟ,
    ನನ್ನ ಕಾಣ ಬಯಸುವ ತಿಣುಕಾಟ,
    ಅಗಾಗ ಮಾಡುವ ತುಂಟಾಟ,
    ಒಮ್ಮೊಮ್ಮೆ ಆಗುವುದು ಒಳ ಜಗಳದ ತಿಕ್ಕಾಟ,
    ಒಟ್ಟೊಟ್ಟಿಗೆ ಆಗುವುದು ಆಟ.. ಪಾಠ,
    ಈಗೀಗ ಕೇಳಿಸುತಿದೆ ಮನಸ್ಸಿನ ಸಣ್ಣದೊಂದು ಗುನುಗಾಟ,
    ಹೇಳುತಿದೆ ಪಿಸುಮಾತಲಿ ಎಂದೆಂದಿಗೂ ಒಂದಾಗಿರಲಿ ನಮ್ಮ ದಾರಿಯ ಓಟ

ಭಾನುವಾರ, ಜುಲೈ 19, 2009

ಪ್ರಕೃತಿಯೊಡಲಲಿ

ಮುಂಜಾನೆಯ ಈ ಸೂರ್ಯ,
ಅಚ್ಚ ಹಸುರಿನ ಕಾಡು, ಹಕ್ಕಿಗಳ ಕೂ ಕೂ
ಇವಕ್ಕಾರು ಕಲಿಸಿದರೀ ಸಂಗೀತ??

ತನ್ನಿಷ್ಟದಂತೆ ಬೆಳೆದು ನಲಿದಾಡುವ ಗಿಡ ಮರಗಳು
ನಡುವೆ ಹರಿವ ನದಿಯ ಝುಳು ಝುಳು
ಇವಕ್ಕಾರು ಕಲಿಸಿದರೀ ಸಂಗೀತ??

ಸುತ್ತುಗಟ್ಟಿ ರವಿಯ ಮರೆ ಮಾಡಿಸುವೀ ಮೋಡಗಳ ರಾಶಿ
ಬಿಟ್ಟು ಬಿಟ್ಟು ಬರುವ ವರುಣ ಧರ ಧರ
ಇವಕ್ಕಾರು ಕಲಿಸಿದರೀ ಸಂಗೀತ??

ಎಲ್ಲಿದ್ದವಿವೂ? ಎಲ್ಲಿದ್ದೆ ನಾನು?
ಇಂದು ಏಕೆ ಬಂದೆ ಎಂದರಿತೆ ನಾನೀಗ,
ಇವರೊಟ್ಟಿಗೆ ಹಾಡಲು ಕಲಿತೆ, ಇವರ ಸಂಗೀತದಲಿ ನಾ ಬೆರೆತೆ

ಮರೆತೆ ಎಲ್ಲ ಚಿಂತೆಯ ಕಂತೆ,
ಹೋದ ಜನ್ಮದಲಿ ಇಲ್ಲೇ ಹುಟ್ಟಿದ್ದೆನಂತೆ,
ಮರು ಜನ್ಮದಲ್ಲೂ ಪ್ರಕೃತಿಯೊಡಲಲಿ ಬದುಕಿ ಸಾಯುವಾಸೆಯೊಂದಿಗೆ ಹೊರಟರೂ ನಾನೇಕೆ ತಿರುಗಿ ನಿಂತೆ?

ಬಣ್ಣ ಬಣ್ಣದ ಚಿಟ್ಟೆ

ಮೊನ್ನೆ ಒಂದು ವಾರ ನಮ್ಮೂರಿಗೆ ಹೋಗಿದ್ದೆ. ಮಳೆ ಕಾಲ, ಕರಾವಳಿ ಎಷ್ಟು ಚೆಂದ? ನನ್ನ ಮನಸ್ಸೆಲ್ಲ ಅಲ್ಲೇ ಇದೆ ಈಗಲೂ... ಎಲ್ಲಿ ನೋಡಿದರೂ ಹಸಿರು, ನೀರು, ಬಣ್ಣ ಬಣ್ಣದ ಚಿಟ್ಟೆಗಳು, ಎಷ್ಟು ನೋಡಿದರೂ ಹೊಸದಾಗಿ ಕಾಣುತ್ತೆ, ಹೊಸ ಅರ್ಥ ಕೊಡತ್ತೆ, ಈ ಕಾಂಕ್ರಿಟ್ ಕಾಡಿಂದ ಆ ಹಸಿರು ಕಾಡಿಗೆ ಹೋಗಿದ್ದು ಏನೋ ಸಂತೋಷ ಕೊಟ್ಟಿದೆ.

ಬಣ್ಣದ ಚಿಟ್ಟೆಗಳನ್ನ ನೋಡಿದಾಗ ಮನಸ್ಸಿಗೆ ಹೊಳೆದದ್ದು ಇಲ್ಲಿದೆ,

ಒಂದಕ್ಕಿಂತಲೂ ಇನ್ನೊಂದು ವಿಭಿನ್ನ
ಹೊನ್ನ ಬಣ್ಣದ ರೆಕ್ಕೆಯೊಂದಿಗೆ ಓಡುವ ನಿನ್ನ
ಹಿಡಿಯಲು ಹಿಂದೆ ಬಂದೆ, ನಿನ್ನ ಕಳವಳ ನೋಡಿ ಬಿಡೋಣವೆನಿಸಿತು ಮತ್ತದೇ ಬಾನಿಗೆ
ಇನ್ನೊಮ್ಮೆ ಬರುವೆ, ಗುರುತು ಹಿಡಿಯುವೆಯ ನನ್ನ??

ಸೋಮವಾರ, ಜೂನ್ 29, 2009

ನನ್ನ ಸ್ವಂತ :)

ಇಂದಿಗೆ 2 ವರ್ಷವಾಯಿತು ನೀ ನನ್ನೊಟ್ಟಿಗಿರಲು ಆರಂಭಿಸಿ

ನೀ ಬಂದ ದಿನ ನನ್ನ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ
ಸಿಹಿ ಹಂಚಿದ್ದೆ ಊರಲ್ಲೆಲ್ಲ

ಎಲ್ಲೆಲ್ಲ ಓಡಾಡಿದೆವು ನಾವು??
ಇಡೀ ಊರು ಸುತ್ತಿದರೂ ಸಾಕಾಗಲಿಲ್ಲ
ಬೆಟ್ಟ, ಗುಡ್ಡ, ಮಳೆ, ಚಳಿಯ ಲೆಕ್ಕಿಸಿದೆ ಅಲೆದೆವು, ಇನ್ನು ತೃಪ್ತಿಯಾಗಿಲ್ಲ!!!

ಕಷ್ಟ ಸುಖದಲಿ ನೀ ನನಗೆ ಜೊತೆಯಾದೆ
ನಾನೆಲ್ಲಿಗೆಂದರೆ ಅಲ್ಲಿ ಬರುತ್ತಿದ್ದೆ ನನ್ನೊಟ್ಟಿಗೆ
ಧನ್ಯವಾದಗಳು ನಿನಗೆ.

ನಿನ್ನ ನನ್ನದಾಗಿಸಿಕೊಳ್ಳಲು ನಾನೆಷ್ಟು ಕಷ್ಟ ಪಟ್ಟೆ ತಿಳಿದಿದೆಯೇ ನಿನಗೆ??
ಹಗಲಿರುಳು ದುಡಿದು, ಬಂಧನದಿಂದ ಬಿಡಿಸಲು ನಿನ್ನ
ಒಂದು ಮಾಡಿಹೆನು ನನ್ನ ನೆತ್ತರು ಮತ್ತು ಮೈ ಹನಿಯನ್ನ

ಇಂದು ನೀನು ನನ್ನ ಸ್ವಂತ!!!!
ವಾಹನವಲ್ಲ ನೀ ನನಗೆ... ನನ್ನ ಜೊತೆಗೆ ಯಾವಾಗಲೂ ಇರುವ ಸಂಗಾತಿ....

(ನನ್ನ ವಾಹನದ ಜನುಮ ದಿನ ಇಂದು... :) )

ಮಳೆ

ಮಳೆ ಸುರಿಸದ ಮೋಡಗಳ ಹಿಂಡನ್ನು ನೋಡಿದಾಗ ಮನಸ್ಸು ಹೇಳುತ್ತೆ

ಭೂಮಿಯು ಒಂದು ಹೆಣ್ಣು,
ಮಳೆಯ ಬರುವಿಗಾಗಿ ಕಾದು ಬಿಸಿಯಾಗಿದ್ದಾಳೆ!!

ಈ ವರುಣನೋ ತನಗಿಷ್ಟ ಬಂದಂತೆ ಆಡುವ ಗಂಡಿನಂತೆ
ಕಾಲವಿನ್ನು ಕೂಡಿಲ್ಲವೆನ್ನುವಂತೆ, ಮೋಡಗಳೊಡನೆ ಸುಮ್ಮನೆ ಬಂದು
ಆಸೆ ತೋರಿಸಿ ಹೊರಟೆ ಹೋಗುವ!!!!

ಎಂದೂ ಮುಗಿಯದ ನಿರೀಕ್ಷೆಗಳ ನಡುವೆ ಯಾವ ಮಾಯದಲ್ಲಿ ಬರುವನೋ ತಿಳಿಯಳು ಭುವಿ...
ನೀರ ಹನಿಯ ಮುತ್ತುಗಳಿಂದ ಅವಳ ಮುದ್ದಿಸಿ, ಬಯಕೆ ತೀರಿಸಿ... ಹೋಗುವ ಮತ್ತೆ ಬರುವೆನೆಂದು

ತಮ್ಮಿಬ್ಬರ ಆ ಸುಮಧುರ ಮಿಲನಕ್ಕೆ,
ಅವನಿಂದ ರಮಿಸಲ್ಪದಳು ಕಾಯುತಿದ್ದಾಳೆ ಈಗಲು...!!!
ಬರುವನೇ ವರುಣ??

ಸೋಮವಾರ, ಜೂನ್ 8, 2009

ಹನಿಗವನ

ಬರಿಯ ಕಣ್ಣುಗಳಲ್ಲವಿದು
ಮನದಾಳದ ಮಾತನ್ನು ಎದುರಿಗಿಡಿವ ಕನ್ನಡಿಯಿದು||
ಬರಿಯ ಮಾತುಗಳಲ್ಲ ಇವು
ಜೀವನದ ಸತ್ಯಗಳ ಅರಿತು ನಡೆವ ಬಂಡಿಯು||

ಆಸೆ

ಬಾನ ಚುಕ್ಕಿಗಳ ಮುಟ್ಟುವ ಆಸೆ
ದ್ವೇಷ ಕೋಪಗಳ ಮೆಟ್ಟಿ ನಿಲ್ಲುವಾಸೆ
ಭಾವನೆಗಳ ಹಿಡಿದಿಟ್ಟು ನನ್ನೊಳಗೆ ಅನುಭವಿಸುವಾಸೆ
ಒಂಟಿ ಎಂಬ ಭಾವನೆಯೆ ಹೊಡೆದೋಡಿಸುವಾಸೆ

ಬಣ್ಣ ಬಣ್ಣದ ಚಿತ್ತಾರ ಬಿಡಿಸುವಾಸೆ
ಅಂತರಂಗದ ಮೃದಂಗವ ಹದವಾಗಿ ಬಡಿದು
ಒಲುಮೆಯಿಂದಿರುವ, ಸ್ಪಂದಿಸುವ ಜೀವಕ್ಕೆ ಜೀವ ಕೊಡುವಾಸೆ

ಹೊಸ ವಸಂತ

ಇಂದೇಕೋ ಅನಿಸುತಿದೆ, ಆದದ್ದೆಲ್ಲ ಒಳಿತೆ
ನಮ್ಮ ದಾರಿಗಳು ಒಂದೇ ಆಗಿತ್ತು
ಐದು ವಸಂತಗಳು ಕನಸುಗಳಂತೆ ಕಳೆದವು
ದಾರಿಗಳು ಕವಲೊಡೆಯಿತು

ಕನ್ನಡಿಯಲಿ ಕಂಡಂತೆ
ಊಟದ ಸಮಯ ಪಕ್ಕ ಕುಳಿತಂತೆ
ಸಂಜೆಯ ವಿಹಾರದಲಿ ಜೊತೆ ಜೊತೆಯಾಗಿ ನಡೆದಂತೆ
ಹೀಗೆ ಏನೇನೋ ಅನಿಸುತ್ತಿತ್ತು ಮೊದಮೊದಲು

ದಿನ ಉರುಳಿದಂತೆ ಏಕತಾನತೆಯು ಬದುಕನ್ನು ಸುತ್ತಿ ಉಸಿರು ಕಟ್ಟಿಸಿತ್ತು
ಎಲ್ಲ ಮರೆಯಲು ತವಕಿಸುತ್ತಿತ್ತು
ಈಗ ಮನಸು ಹೊಸ ದಾರಿಯ ಹುಡುಕ ತೊಡಗಿದೆ
ನವ ವಸಂತಕ್ಕೆ ಆಹ್ವಾನ ನೀಡಿದೆ
ಹೊಸಬರ ಬರುವಿಗಾಗಿ ಕಾಯುತಿದೆ
ಬಾಳೆಲ್ಲ ಅವರೊಂದಿಗಿರಲು ಬಯಸುತಿದೆ

ಶನಿವಾರ, ಮೇ 16, 2009

ನಲ್ಲ ನಲ್ಲೆಯ ಮಾತುಗಳು - ಪಾರ್ಟ್ 1

ಮೌನ ಮುರಿಯುವ ಮಾತು ಬೇಡವಾಗಿದೆ ಮನಕೆ ಏಕೋ ನಾನರಿಯೆ ಗೆಳೆಯ

ನಿನ್ನ ಅಂತರಾಳದ ದನಿಯ ನಾ ತಿಳಿಯಲಾರೆ ನೀ ಮಾತನಾಡದಿದ್ದರೆ,
ಮಾತಾಡು ಬಾಲೆ, ನಿನ್ನ ಗೆಳೆಯ ಮೂಕ

ಮಾತಾಡಿ ಮುಗಿಸುವ ಆತುರ ಬೇಡ,
ಮನದಲ್ಲೇ ಇರಲಿ ಅಂತರಾಳದ ಆಸೆಗಳು, ಮಾತುಗಳು...

ನಿನ್ನ ಅಂತರಾಳವು ಚಿನ್ನದ ಗಣಿ ಬಾಲೆ,
ಎಷ್ಟು ಅಗೆದರೂ ನನಗೆ ದೊರೆವುದೆ ಚಿನ್ನ...
ಅದೆಂದಿಗೂ ಮುಗಿಯದು.. ಮಾತಾಡು ಗೆಳತಿ...
ನನಗೆ ಚಿನ್ನದ ಮೋಹ!!!

ಬಾಲೆಯ ಮನಸ್ಸು ಚಿನ್ನವಲ್ಲ... ಮಲ್ಲಿಗೆಯ ಹೂವಿದ್ದಂತೆ...
ಎಲ್ಲ ಕಾಲದಲ್ಲೂ ಅರಳುವುದಿಲ್ಲ...
ಕೆಲ ಹೂವು ಮುಡಿಗೆ... ಕೆಲವು ದೇವರಿಗೆ...
ನಾನಾವ ಹೂವೆಂದು ಅರಿಯದೇ... ಅರಸುತಿಹೆನು ಗೆಳೆಯ!!!

ಮಲ್ಲಿಗೆಯು ಮುಡಿದರೆ ಪತಿ ದೇವರಿಗೆ,
ಚೆಲ್ಲಿದರೆ ಜಗವನಾಳುವ ದೇವರಿಗೆ...
ಎಲ್ಲೇ ಆದರು ದೇವರ ಪೂಜೆಗೆ ಅಲ್ಲವೇ??

ತನಗಾಗಿ ಬದುಕದ ಮಲ್ಲಿಗೆಯು ನಾನು...
ಯಾವ ದೇವರು ಬಂದು ಹರಸಿಯಾನು ನನ್ನ?

ಬಳ್ಳಿಯೂ ತನಗಾಗಿ ಬದುಕದು...
ಬಿಸಿಲ ಬೇಗೆಯ ತಡೆದು, ಚಳಿ ಗಾಳಿಯ ತೀರಿ,
ಆ ತುಂತುರು ಹನಿಯಯಲಿ ನೆನೆದು, ತನ್ನ ಕನಸುಗಳ ಬಚ್ಚಿಟ್ಟುಕೊಂಡು,
ಅದಕೆ ಹೂವಿನ ರೂಪವ ಕೊಟ್ಟು, ಅದಕಾಗಿ ಬದುಕುವುದು ಬಳ್ಳಿ...
ಹೂವಿಗೆ ಅದರ ಅರಿವಾದರೂ ಇಲ್ಲವೇ ಬಾಲೆ??

ಹೂವು ನಾನಾದರೆ?? ಬಳ್ಳಿ ನೀನಾ??
ನಿನ್ನ ತುಂಬ ತಬ್ಬಿ, ಹರಡಿ,
ಸುವಾಸನೆಯ ತಂಗಾಳಿಯಾಗ ಬಯಸುವೆ ನಲ್ಲ..
ಆ ಅರ್ಹತೆ ನನಗಿದೆಯೇ??

ಮಧುಕರನಿಗೇನು ಗೊತ್ತು, ಮಧುವಿನ ಸಿಹಿ??
ಏಕೆಂದರೆ ಅವನೆಂದೂ ಸವಿದಿಲ್ಲ,
ನಿನ್ನ ಮಾತಿನ ಮುತ್ತಿನ ಸವಿ, ನಿನ್ನ ಅಧರಗಳ ಸಿಹಿ ಮಕರಂದದ ಸವಿ ನಿನಗೇನು ಗೊತ್ತು??
ದಿನವೂ ನಿನ್ನ ನೋಡಿ ಮನದಲ್ಲೇ ನಿನ್ನ ಮುದ್ದಿಸುವ ನನಗೆ ಗೊತ್ತು ಅದರ ಸುಖ...

ನಾನೇನು ಕಮ್ಮಿ ಇಲ್ಲ ನಿನಗಿಂತ,
ನಿನ್ನ ಕುಡಿ ಮೀಸೇಯು ನನ್ನ ಆಕರ್ಶಿಸಿದೆ,
ನಿನ್ನ ನಿಲುವು ನನ್ನನ್ನು ಮೂಕಳನ್ನಾಗಿಸಿ ನಿನ್ನನ್ನೇ ನೋಡಿಸುವಂತೆ ಮಾಡಿ,
ವರಿಸಿದರೆ ನಿನ್ನನ್ನೇ ಎಂಬ ಆಸೆಯ ಗಿಡಕೆ ನೀರೆರೆಸಿ ಮರವಾಗಿಸಿದೆ

ನಿನ್ನ ಹಣೆಯ ಸೂರ್ಯನ ಚುಂಬಿಸುವ ಆಸೆ,
ನಿನ್ನ ಬೆವರ ಹನಿಯ ಮುತ್ತಾಗಿಸುವ ಆಸೆ,
ನಿನ್ನ ಪ್ರೀತಿಯನ್ನು ಕದನದಿ ಕದಿಯುವ ಆಸೆ,
ಏನೆಂದು ನಾ ಹೇಳಲಿ, ನಿನ್ನೊಡಲ ಕಡಲಲ್ಲಿ ನಾ ಈಜುವ ಆಸೆ...

ನಾವಿಬ್ಬರೂ ಹೀಗೆ, ಒಬ್ಬರು ಮತ್ತೊಬ್ಬರಿಗಾಗಿ ಬದುಕಿದರೆ ಬಾಲೆಷ್ಟು ಚೆನ್ನ ಅಲ್ಲವೇ ಚಿನ್ನ??

ಮಂಗಳವಾರ, ಮೇ 5, 2009

ನನ್ನ ದೊಡ್ಡಮ್ಮ.. ನನಾಗಾಗಿ... ನನ್ನ ಬಗ್ಗೆ ಬರೆದ ಕವನ....

ಬೆ - ಬೆಡಗಿ

ಬೆಳಗಿನಾ ಹೊತ್ತಿನಲಿ ಒಂದು ದಿನ
ಬಂದಿಳಿದಳು ನಮ್ಮಲ್ಲಿಗೆ ಈ ಹುಡುಗಿ

ಬೆಂಗಳೂರಿನ ಬೆಡಗಿ

ಮಾತಿನ ಮಲ್ಲಿ ಸ್ನೇಹ ಎಲ್ಲರಲ್ಲಿ
ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ
ಎಲ್ಲದರಲ್ಲೂ ಮುಂದಾಳತ್ವ
ನಾನೆಂದರೆ ಅವಳಿಗಿಷ್ಟ
ಅವಳೆಂದರೆ ನನಗೂ ಬೆಳೆದಿತ್ತು ಪ್ರೀತಿ, ಸ್ನೇಹ, ಸಲಿಗೆ, ಆತ್ಮೀಯತೆ
ಆಗುತಿತ್ತು ಕೆಲವೊಮ್ಮೆ ವಾಗ್ವಾದ
ಸ್ವಲ್ಪ ಹೊತ್ತಿನಲ್ಲೇ ಒಮ್ಮತದ ಅಭಿಪ್ರಾಯ
ಎರಡು ತಿಂಗಳ ಕಾಲ ಜೊತೆಯಲ್ಲಿದ್ದು ಏನೆಲ್ಲಾ ಮಾತಾಡಿ
ಕೊನೆಗೆ ಕೇಳಿಕೊಂಡೆವು... ಅರಿತೆವೇನು ನಾವು ನಮ್ಮ ಅಂತರಾಳವ?

ಹಳ್ಳಿಗೆ ಬಂದ ಹುಡುಗಿ ಎಲ್ಲರ ಮನವ ಗೆದ್ದು (ಕದ್ದು)
ಕೊನೆಗೊಮ್ಮೆ "ಬಾಯ್ ದೊಡ್ಡಮ್ಮ" ಎಂದು ವಿದಾಯ ಹೇಳಿ ಹೊರಟು ನಿಂತಳು
ಈ ಹುಡುಗಿ ಬೆಂಗಳೂರಿನ ಬೆಡಗಿ

ಚೆನ್ನಾಗಿದೆ ಅಲ್ವಾ?? ತುಂಬ ಚೆಂದ ಇದ್ದು ದೊಡ್ಡಮ್ಮ.... ಥ್ಯಾಂಕ್ಸ್.... :)

ಸೋಮವಾರ, ಏಪ್ರಿಲ್ 13, 2009

ಇವತ್ತು ಸಂಕಷ್ಟಿ....

ನಿನ್ನೆ ಸಂಜೆ ನೆನಪಾಯ್ತು.... ಇವತ್ತು ಸಂಕಷ್ಟಿ ಅಂತ.....

ಇವತ್ತು ಉಪವಾಸ.... ಊಟವಿಲ್ಲ ಊಟಕ್ಕಿಂತ ಕಡಿಮೆ... ಸ್ವಲ್ಪ ಅಲ್ಲಾರೀ.... ತುಂಬಾನೇ ಕಡಿಮೆ ಫಲಾಹಾರ....

Office cafetaria ಊಟ ಬಾಯಲ್ಲಿ ಇಡೋಕ್ಕೆ ಕಷ್ಟ ಪಡ್ತಾ ಇದ್ದ ಒಬ್ಬ collegue ನನ್ನ ಫಲಾಹಾರ ನೋಡಿ... ನೀವು ಇದನ್ನ ತಿನ್ನಕ್ಕಾಗದೆನೇ fruites ತಿಂತಾ ಇದ್ದೀರಾ ಅಂತ ನಂಗೆ ಕಷ್ಟವಾಗೋ english'ಲ್ಲಿ ಕೇಳಿದ... ಇವತ್ತು ಕಥೆ ಹೇಳಲೇ ಬೇಕು ಅಂತ ಅನ್ಸ್ತು.... ಈ ತರಹ ಕೇಳಿದೊರಿಗೆಲ್ಲ ಯಾಕಾದ್ರು ಕೇಳಿದ್ನಪ್ಪ ಅನ್ನೋ ತರಹ ಪುಉರ್ತಿ ಹೇಳಿದ್ದೀನಿ..... ಅವನಿಗೂ ಹೇಳಿದೆ.... (ಇನ್ನು ನನ್ನ ಯಾವ ಪ್ರಶ್ನೆನು ಕೇಳೋದೇ ಇಲ್ಲ ಅನ್ಸುತ್ತೆ... ಪಾಪ!!) ಸರಿ ಹಾಗಿದ್ರೆ ನಿಮಗೂ ಹೇಳ್ಲ?

Permission ಕೊಡೋಕ್ಕೆ ಮುಂಚೆನೇ ತೊಗೊಂಡು ಬಿಡ್ತೀನಿ... :)

ನಾನು PUC ಓದ್ತಾ ಇದ್ದಾಗಿನ flashback... ಒಂದಿನ ನಮ್ಮ lecturer.. ಹೆಸರು ಹೇಳಲ್ಲ.... ಅವರು ಅಪ್ಪಿ ತಪ್ಪಿ ಇದನ್ನ ನೋಡಿದ್ರೆ... ನನ್ನ ಹುಡುಕ್ಕೊಂಡು ಬಂದು ಹೊಡಿತಾರೆ ಅಷ್ಟೆ....

ಆಯಮ್ಮ ಅಂದ್ರೆ ನಮಗ್ಯಾರ್ಗೂ ಆಗ್ತ ಇರ್ಲಿಲ್ಲ.... ತನ್ನ ಗಂಡ ಮಕ್ಕಳ ಕೋಪಾನೆಲ್ಲಾ ನಮ್ಮೇಲೆ ತೀರ್ಸ್ಕೋತಾ ಇದ್ರೋ...ಅಥವ ನಾವೇ ಕೋತ್ಕೊತಿಗಳ ತರಹ ಆಡ್ತಾ ಇದ್ವೋ.. ನಂಗೊತ್ತಿಲ್ಲ... ಒಟ್ನಲ್ಲಿ ಕೋಪ ಮಾಡ್ಕೊಂಡೇ ಇರೋರು...

ಇದಕ್ಕೆ ಸರಿಯಾಗಿ ಒಂದಿನ ನನ್ನ ಒಬ್ಬ school ಗೆಳತಿ... (ನನ್ನ college'ನಲ್ಲೆ ಓದ್ತಾ ಇದ್ಲು...) ನನಗೂ ಆ ಗೆಳತಿಗೂ ಮಾತುಕಥೆ ನಿಂತು 6 ತಿಂಗಳ ಮೇಲೆ ಆಗಿತ್ತು..... ನಾವಿಬ್ರು ಯಾವುದೊ ಕಾರಣಕ್ಕೆ.... ಆ ಕರಣ ಏನು ಅಂತ ನೆನಪಿಲ್ಲ (ಇದ್ದಿದ್ರೆ ಅದನು ಬರೀತಾ ಇದ್ದೆ :-) ) ಒಟ್ಟು ಜಗಳ ಆಡಿದ್ವಿ....
ಸರಿ... ಅವರಮ್ಮ ... " ನನ್ನ ಮಗಳು ಯಾರ್ ಯಾರ್ ಜೊತೆ ಎಲ್ಲೆಲ್ಲೊ ತಿರಗ್ತಾ ಇದ್ದಾಳೆ ಅಂತ ಸುಳ್ಳು ಸುಳ್ಳೇ ಯಾರೋ ಫೋನ್ ಮಾಡಿದ್ರು ಮೇಡಂ...." ಅಂತ ಕಂಪ್ಲೇಂಟ್ ಮಾಡಿದ್ರು.... ತೀರ ಯಾರು ಅಂತ ಕೇಳಿದ್ದಕೆ ಅವಳ್ಯಾವಳೋ ನನ್ನ ಹೆಸರೇ ಹೇಳಿದ್ದಾಳೆ...
ತನ್ನ ಪಾಡಿಗೆ class'ನಲ್ಲಿ ತರ್ಲೆ ಮಾಡ್ಕೊಂಡಿದ್ದ ನಂಗೆ ಆ lecturer ಹಿಂದೆ ಮುಂದೆ ನೋಡದೆ ಹಿಗ್ಗ ಮುಗ್ಗ ಬೈದ್ರು... ಉಪೇಂದ್ರ film ತರಹ "ನಾನವಳಲ್ಲ ನಾನವಳಲ್ಲ" ಅಂತ ಶಂಖ ಹೊಡ್ಕೊಂಡ್ರೂ ಕೇಳೋರೆ ಗತಿ ಇಲ್ಲ....

ಅವತ್ತಿಂದ india secret'ಗಳನ್ನೆಲ್ಲ paakistana'ಕ್ಕೆ ಹೇಳಿದವಳ ಹಾಗೆ ಯಾವ ಹುಡುಗೀರು ನನ್ನ ಹತ್ರ ಏನು ಹೇಳ್ತಾ ಇರ್ಲಿಲ್ಲ... (ಇವಳಿಗೆ ನಂ boy friends ಬಗ್ಗೆ ಗೊತ್ತಾಗಿ ಮನೆಗೆ ಫೋನ್ ಮಾಡಿ ಹೇಳ್ತಾಳೇನೋ ಅನ್ನೋ ಭಯದಿಂದ ಇರಬಹುದು ಅಂತ ನಂಗೆ ಎಷ್ಟೋ ದಿನ ಆದ ಮೇಲೆ ಅರ್ಥ ಆಯಿತು.... ಅದು ಬೇರೆ ವಿಷ್ಯ ಬಿಡಿ....)

ಹೀಗೆ ದಿನಗಳು ಉರುಳಿದವು.... ಒಂದಿನ ನಮ್ಮಮ್ಮ ಶ್ರೀ ಕೃಷ್ಣ ನ ಶ್ಯಮಂತಕ ಮಣಿ ಕಥೆ ಹೇಳಿದಾಗ ನನಗೆ ನೆನಪಿಗೆ ಬಂತು.... ನಾನು ಚೌತಿ ದಿನ ಚಂದ್ರ ದರ್ಶನ ಮಾಡಿದ್ದಕ್ಕೆ ನನ್ನ ಮೇಲೆ ಇಂಥ "ಘನ ಘೋರ" ಅಪವಾದ ಬಂತು ಅಂತ.... ಶ್ರೀ ಕೃಷ್ಣನನ್ನೇ ಬಿಡದ ಅಪವಾದ ನನ್ನ ಬಿಟ್ಟೀತೆ??

ಸರಿ.. ಆಗ್ಯಾವಾಗೋ ಆಗಿದ್ದಕ್ಕೆ ಈಗ್ಯಾಕೆ ಸಂಕಷ್ಟಿ ಮಾಡ್ತಾ ಇದ್ದಾಳೆ ಅಂತ ಯೋಚಿಸಬೇಡಿ..... ನನ್ನ ದುರದೃಷ್ಟವಶಾತ್ ಈ ವರ್ಷಾನು ನೋಡ್ಬಿಟ್ಟೆರೀ... ಮೊದಲೇ recessio'ನ್ನು.. ನಮ್ಮ ಮ್ಯಾನೇಜರ್ ಬೇರೆ ಹೆಂಗಸು.. ನಾನು ಅವಳನ್ನು ಅವಳ BF ಜೊತೆ commercial street'ನಲ್ಲಿ ನೋಡಿದೆ ಅಂತ ಯಾರದ್ರು ನನ್ನ ಹೆಸರು ಹೇಳ್ಕೊಂಡು ಫೋನ್ ಮಾಡಿದ್ರೆ ಅನ್ನೋ ಭಯಕ್ಕೆ ಗಣೇಶನಿಗೆ ಕಾಪಾಡಪ್ಪ ಅಂತ application ಹಾಕ್ತಾ ಇದ್ದೀನಿ.....

ಶುಕ್ರವಾರ, ಮಾರ್ಚ್ 27, 2009

ಏನೋ??

ಬಾನಿನಲಿ ಕಾರ್ಮೋಡಗಳ ಚಿತ್ತಾರ ಮೂಡಿ
ನೋಡಿದವರ ತನು ಮನ ನಡುಗಿಸಿದೆ

ಮಿಂಚಿನ ಭರಾಟೆಯಲಿ ಗಗನವೇ ಗುಡುಗಿದೆ
ಆಗಸವ ಬಿಸಿಯಾಗಿ ಚುಂಬಿಸುವ ಸೂರ್ಯನು
ಒಂದೆಡೆ ಭಯ ಮೂಡಿಸುತ ಮರೆಯಾಗುತಿಹನು


ಉರಿಬಿಸಿಲಿನಂಥ ಕಷ್ಟಗಳೂ ಹೀಗೆಯೇ ಏನೋ??
ಮೊದಲಿಗೆ ಗುಡುಗಿ, ನಡುಗಿಸಿ ಕತ್ತಲಿಗೆ ಕರೆದೊಯ್ದು
ಕೊನೆಯಲ್ಲಿ ಮಳೆ ನೀರಿನ ಪನ್ನೀರ ಸುರಿಸುವುದೋ ಏನೋ??

ಮನಸಿನ ಕಡಲು

ಬರೆಯಬೇಕೆಂದಿದೆ ಮನಸಿನ ಕಡಲು
ಕಡಲಿನಾಳದಲಿ ಅಡಗಿದೆ ಹಲಮುತ್ತುಗಳು
ಹೊರಬರಲು ಕೇಳುತಿದೆ ಪ್ರೇರಣೆಯ ಒಡಲು
ಯಾರ ಮುಂದೆ ಹೇಳಬೇಕೋ ಗೊತ್ತಾಗದಂತಾಗಿದೆ ನನ್ನ ಅಳಲು!!!

ನನ್ನ ನೆರಳು...

ಜೀವನದ ಹಾದಿಯಲಿ
ಈಗಷ್ಟೇ ಆರಂಭವಾಗಿರುವ ಬಾಳ ಪುಟಗಳಲಿ

ನೋಡಿದೆ ಹಲಜನರ
ಬೆರೆತೆ ಕೆಲವರೊಡನೆ
ಎಲ್ಲರ ಅರಿತೇ, ಎಂದರಿತೆ

ನನ್ನ ಲೆಕ್ಕಾಚಾರಗಳ ಮೀರಿ
ತಲೆಕೆಳ ಮಾಡಿ

ಹಿಂದೆಯೇ ನನ್ನ ಬಿಟ್ಟು
ಎಲ್ಲರೂ ಮುಂದೆ ಓಡಿದರು

ತಿರುಗಿ ನೋಡಿದೆ
ನಾನೋಬ್ಬಳೇ ಇರಲಿಲ್ಲ
ನೀನೂ ಇದ್ದೇ, ಹಿಂದೆಯೇ
ನನ್ನ ನೆರಳಾಗಿ......

ಗುರುವಾರ, ಮಾರ್ಚ್ 26, 2009

ಹುಟ್ಟು ಹಬ್ಬದ ಶುಭಾಷಯಗಳು...

ಮೋಡಗಳ ನಡುವೆ ಮರೆಯಾಗಿ ಏರುತಿಹ ಸೂರ್ಯನ ಕಿರಣಗಳು ಹೇಳಿದವು..
ಈ ದಿನ ನಿನ್ನ ಜನುಮ ದಿನವೆಂದು

ನೆನಪುಗಳು ಕೈ ಬೀಸಿ ಕರೆದವು ನಾವು ನಡೆದ ಹಾದಿಗಳಲಿ
ನಮ್ಮಿಬ್ಬರ ಹೆಜ್ಜೆಯ ಹುಡುಕಿದೆ, ಎಲ್ಲಿಯೂ ಕಾಣಲಿಲ್ಲ!!!
ಆಗಲೇ ತಿಳಿಯಿತು, ಹೊಸ ಮಳೆಯು ಹಳೆಯ ಕುರುಹುಗಳ ಅಳಿಸಿ ಹಾಕಿವೆ
ಕಣ್ಣಾಲಿಗಳ ತೋಯ್ಸಿವೆ

ನೀನು ಆತ್ಮೀಯನಾಗಿ ಉಳಿದಿಲ್ಲ
ಆದರೂ ಕಾಡುತಿವೆ ನೆನಪುಗಳು ಹಗಲಿರುಳು

ಪ್ರತಿ ವರುಷ ಮೊದಲಿಗಳಾಗೋ ಚಟವಿರುವ ಈ ನಿನ್ನ ಗೆಳತಿ (ಗೆಳತಿ?)
ಈ ವರುಷವೂ ಹರಸದೇ ಇರುವಳೆ???

ಈ ನನ್ನ ಪುಟ್ಟ ಕವನದೊಂದಿಗೆ ಪ್ರಾರ್ಥಿಸುವೆ ದೇವರಲಿ
ನಗುನಗುತಲಿರು ನೀ ಯಾವಾಗಲೂ
ಹುಟ್ಟು ಹಬ್ಬದ ಶುಭಾಷಯಗಳು...