ಶುಕ್ರವಾರ, ಮಾರ್ಚ್ 27, 2009

ಏನೋ??

ಬಾನಿನಲಿ ಕಾರ್ಮೋಡಗಳ ಚಿತ್ತಾರ ಮೂಡಿ
ನೋಡಿದವರ ತನು ಮನ ನಡುಗಿಸಿದೆ

ಮಿಂಚಿನ ಭರಾಟೆಯಲಿ ಗಗನವೇ ಗುಡುಗಿದೆ
ಆಗಸವ ಬಿಸಿಯಾಗಿ ಚುಂಬಿಸುವ ಸೂರ್ಯನು
ಒಂದೆಡೆ ಭಯ ಮೂಡಿಸುತ ಮರೆಯಾಗುತಿಹನು


ಉರಿಬಿಸಿಲಿನಂಥ ಕಷ್ಟಗಳೂ ಹೀಗೆಯೇ ಏನೋ??
ಮೊದಲಿಗೆ ಗುಡುಗಿ, ನಡುಗಿಸಿ ಕತ್ತಲಿಗೆ ಕರೆದೊಯ್ದು
ಕೊನೆಯಲ್ಲಿ ಮಳೆ ನೀರಿನ ಪನ್ನೀರ ಸುರಿಸುವುದೋ ಏನೋ??

ಮನಸಿನ ಕಡಲು

ಬರೆಯಬೇಕೆಂದಿದೆ ಮನಸಿನ ಕಡಲು
ಕಡಲಿನಾಳದಲಿ ಅಡಗಿದೆ ಹಲಮುತ್ತುಗಳು
ಹೊರಬರಲು ಕೇಳುತಿದೆ ಪ್ರೇರಣೆಯ ಒಡಲು
ಯಾರ ಮುಂದೆ ಹೇಳಬೇಕೋ ಗೊತ್ತಾಗದಂತಾಗಿದೆ ನನ್ನ ಅಳಲು!!!

ನನ್ನ ನೆರಳು...

ಜೀವನದ ಹಾದಿಯಲಿ
ಈಗಷ್ಟೇ ಆರಂಭವಾಗಿರುವ ಬಾಳ ಪುಟಗಳಲಿ

ನೋಡಿದೆ ಹಲಜನರ
ಬೆರೆತೆ ಕೆಲವರೊಡನೆ
ಎಲ್ಲರ ಅರಿತೇ, ಎಂದರಿತೆ

ನನ್ನ ಲೆಕ್ಕಾಚಾರಗಳ ಮೀರಿ
ತಲೆಕೆಳ ಮಾಡಿ

ಹಿಂದೆಯೇ ನನ್ನ ಬಿಟ್ಟು
ಎಲ್ಲರೂ ಮುಂದೆ ಓಡಿದರು

ತಿರುಗಿ ನೋಡಿದೆ
ನಾನೋಬ್ಬಳೇ ಇರಲಿಲ್ಲ
ನೀನೂ ಇದ್ದೇ, ಹಿಂದೆಯೇ
ನನ್ನ ನೆರಳಾಗಿ......

ಗುರುವಾರ, ಮಾರ್ಚ್ 26, 2009

ಹುಟ್ಟು ಹಬ್ಬದ ಶುಭಾಷಯಗಳು...

ಮೋಡಗಳ ನಡುವೆ ಮರೆಯಾಗಿ ಏರುತಿಹ ಸೂರ್ಯನ ಕಿರಣಗಳು ಹೇಳಿದವು..
ಈ ದಿನ ನಿನ್ನ ಜನುಮ ದಿನವೆಂದು

ನೆನಪುಗಳು ಕೈ ಬೀಸಿ ಕರೆದವು ನಾವು ನಡೆದ ಹಾದಿಗಳಲಿ
ನಮ್ಮಿಬ್ಬರ ಹೆಜ್ಜೆಯ ಹುಡುಕಿದೆ, ಎಲ್ಲಿಯೂ ಕಾಣಲಿಲ್ಲ!!!
ಆಗಲೇ ತಿಳಿಯಿತು, ಹೊಸ ಮಳೆಯು ಹಳೆಯ ಕುರುಹುಗಳ ಅಳಿಸಿ ಹಾಕಿವೆ
ಕಣ್ಣಾಲಿಗಳ ತೋಯ್ಸಿವೆ

ನೀನು ಆತ್ಮೀಯನಾಗಿ ಉಳಿದಿಲ್ಲ
ಆದರೂ ಕಾಡುತಿವೆ ನೆನಪುಗಳು ಹಗಲಿರುಳು

ಪ್ರತಿ ವರುಷ ಮೊದಲಿಗಳಾಗೋ ಚಟವಿರುವ ಈ ನಿನ್ನ ಗೆಳತಿ (ಗೆಳತಿ?)
ಈ ವರುಷವೂ ಹರಸದೇ ಇರುವಳೆ???

ಈ ನನ್ನ ಪುಟ್ಟ ಕವನದೊಂದಿಗೆ ಪ್ರಾರ್ಥಿಸುವೆ ದೇವರಲಿ
ನಗುನಗುತಲಿರು ನೀ ಯಾವಾಗಲೂ
ಹುಟ್ಟು ಹಬ್ಬದ ಶುಭಾಷಯಗಳು...