ಸೋಮವಾರ, ಅಕ್ಟೋಬರ್ 10, 2011

ಮಂಗಳವಾರ, ಸೆಪ್ಟೆಂಬರ್ 13, 2011

ಅವರಿವರ ನೋಡಿ ಅನಿಸಿದ್ದು ಹೀಗೆ ...

ನೆನೆಸುವುದೆಲ್ಲ ಸಿಹಿಯದೆ ಆಗಿರಲಿ
ಕಹಿಯ ಪುಟವನ್ನೇ ನೋಡಿ ಕಣ್ಣೀರನೇಕೆ ಕರಗಿಸುವೆ?
ಒಳ್ಳೆಯದೇ ಬಗೆ ಕೆಟ್ಟವರಿಗೂ ಎಂಬ ವೇದಾಂತ ಬೇಡ
ಕ್ಷಣಿಕ ಸುಖದ ಸಂತೋಷವೂ ಬೇಡ
ಹಳೆಯದೆಲ್ಲವ ಮರೆತು ಸಿಗುವ ನೆಮ್ಮದಿಯ ಬದುಕು ಸಾಲದೇ ಗೆಳೆಯ??

-------------------------------------

ಬದುಕುವ ದಿನವೆಲ್ಲ ಗಂಟು ಮಾಡುವ ಚಿಂತೆ
ಕಂಡೋರ ಕಣ್ಣು ಬೀಳುವ ಸಮಯಕೆ ಮುಚ್ಚಿಡುವ ಚಿಂತೆ
ಕೊನೆಗೊಂದು ದಿನ ಚಿತೆಯ ಮೇಲೆರಿಸಿದಾಗ
ಜವರಾಯ ಕರೆದೊಯ್ಯುವಾಗ ಹೊನ್ನ ಕೊಂಡೊಯ್ಯುವರೆ?
ಅಷ್ಟಿಲ್ಲದೆ ಹೇಳಿದರೆ ಹಿರಿಯರು "ಜಿಪುಣ ಮಾಡಿಟ್ಟಿದ್ದು ಪರರಿಗೆಂದು"?

ಗುರುವಾರ, ಆಗಸ್ಟ್ 4, 2011

ನಾಡಗೀತೆ - ವೇಷ ಬೇರೆ ಭಾಷೆ ಬೇರೆ

ಕವಿ: ಸಾ ಶಿ ಮರುಳಯ್ಯ

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ,
ಇದೇ ನಮ್ಮ ಭಾರತ, ಪುಣ್ಯ ಭೂಮಿ ಭಾರತ ||ವೇಷ ಬೇರೆ||

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ||ವೇಷ ಬೇರೆ||

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕ್ರುತಿ ||ವೇಷ ಬೇರೆ||

PS: ಇದೂ ಕೂಡ ನಮ್ ಸ್ಕೂಲಲ್ಲಿ ಹೇಳ್ತಾ ಇದ್ದ ಹಾಡು, ಆದ್ರೆ ಇದರ ರಾಗ ಮರೆತು ಹೋಗಿದೆ, ಯಾರಾದ್ರೂ ನೆನಪು ಮಾಡಿ ಕೊಟ್ರೆ ಅವರಿಗೆ ದೊಡ್ಡದೊಂದು ಚಾಕಲೇಟ್ ಕೊಡಿಸ್ತೀನಿ :)

ನಾಡ ಗೀತೆ - ಐದು ಬೆರಳು ಕೂಡಿ ಒಂದು ಮುಷ್ಟಿಯು

ಕವಿ: H S ವೆಂಕಟೇಶ ಮೂರ್ತಿ

ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೄ ಧಾರೆ ತೊಳೆಯಲಿ
ಮೊಳಗಲಿ ಮೊಳಗಲಿ ನಾಡಗೀತವೂ ಮೂಡಲಿ ಮೂಡಲಿ ಸುಪ್ರಭಾತವೂ ||ಐದು ಬೆರಳು||

PS: ಇದೂ ನಮ್ ಸ್ಕೂಲ್ ಶನಿವಾರದ ನಾಡಗೀತೆ ಲಿಸ್ಟಲ್ಲಿ ಇತ್ತು :)
ashru(ಅಶೄ) ಸರಿಯಾಗಿ ಟೈಪ್ ಮಾಡ್ಲಿಕ್ಕೆ ಆಗದ್ದಕ್ಕೆ ಕ್ಷಮಿಸಬೇಕು.

ಎಲ್ಲಿ ಎಲ್ಲಿ ರಮ್ಯತಾಣ - ಭಾವಗೀತೆ ೧೧

ಕವಿ: ನಿಸಾರ್ ಅಹ್ಮೆದ್

ಎಲ್ಲಿ ಎಲ್ಲಿ ರಮ್ಯತಾಣ ಅಲ್ಲಿ ನಿನಗೆ ವಂದನ
ಎಲ್ಲಿ ಎಲ್ಲಿ ಪುಣ್ಯ ಧಾಮ ಹೂವು ಧವನ ಚಂದನ ||ಎಲ್ಲಿ ಎಲ್ಲಿ||

ತುಂಗೆ ಕೃಷ್ಣೆ ಕಾವೇರಿ ನಿನ್ನ ಪ್ರಾಣ ಸ್ಪಂದನ
ಹರಿದ್ವರ್ಣ ತರು ಸುಪರ್ಣ ವಿಪಿನ ಸ್ವಪ್ನ ನಂದನ
ಪಶ್ಚಿಮಾದ್ರಿ ದರಿತಟಾಕ ಘಟ್ಟನಾಕ ಸದೃಶ
ಬಯಲು ಸೀಮೆ ತೆನೆಸುಭೀಕ್ಷೆ ಕಲ್ಪ ವೃಕ್ಷ ಪರವಶ ||ಎಲ್ಲಿ ಎಲ್ಲಿ||

ಬಸದಿ ಚರ್ಚು ಗುಡಿ ಮಸೀದಿ ಅಗ್ಗಳಿಕೆಯ ಕೇತನ
ಬಾಣವೆನಿತು ಸತ್ಯದೆಡೆಗೆ ಬತ್ತಳಿಕೆ ಸಚೇತನ
ಕಪಾಲಿಕ ಲಕುಲ ಶಕ್ತಿ ನಾಗಪಂಥ ಸರಿಸಮ
ಅಂತೆ ಜಿನ ಫಕೀರ ಸಂತ ಎಲ್ಲರಿಗು ನಮೋನ್ನಮ ||ಎಲ್ಲಿ ಎಲ್ಲಿ||

ಸುಸಂಸ್ಕಾರ ಸಂಪನ್ನಳು ಕನ್ನಡಾಂಬೆ ಧನ್ಯಳು
ವಿವಿಧ ಜನ ಅನನ್ಯೆ ಮಾನ್ಯೆ ಸಚ್ಚಿದಂಶ ಜನ್ಯಳು
ರತ್ನದಂತೆ ಕಂದರಮಿತ ಪ್ರತಿಭಾ ಪ್ರಭೆ ಹಬ್ಬಲಿ
ನುಡಿಪರಾಗ ಅತಿಸರಾಗ ವಿಶ್ವವನ್ನೆ ತಬ್ಬಲಿ,ವಿಶ್ವವನ್ನೆ ತಬ್ಬಲಿ, ವಿಶ್ವವನ್ನೆ ತಬ್ಬಲಿ||ಎಲ್ಲಿ ಎಲ್ಲಿ||

PS: ನಮ್ ಸ್ಕೂಲ್ ಅಲ್ಲಿ ಈ ಹಾಡು ಹಾಡ್ತಾ ಇದ್ವಿ .. :)

ಬುಧವಾರ, ಆಗಸ್ಟ್ 3, 2011

time pass

ಬೇಡವಾಗಿದೆಯೇ ಪ್ರಪಂಚದ ನೆರವು?
ಕಾಣದ ದೂರದ ತೀರವ ಹುಡುಕುವ ಬಯಕೆ ಇಲ್ಲದ್ದರೂ, ನಾವೇಕೆ ಭಿನ್ನರಲಿ ವಿಭಿನ್ನರು??
ಯಾವ ಗೊತ್ತು ಗುರಿ ಇರದ ಏಕಾಂಗಿತನದ ಯಾದಿಯಲಿ ಸುಮ್ಮನೆ ಹೀಗೆ ಬರೆದೆನ ಏನೇನೋ?
ಆಲೋಚನೆಗೆ ಸಿಲುಕದ್ದು , ಭಾವನೆಗೆ ನಿಲುಕದ್ದು ಅಗಾಧ ಮಳೆಯ ಹನಿಗಳಲಿ, ಅಲ್ಲೇ ಕಳೆದು ಹೋಗುವ ಮತ್ತೊಂದು ಬಯಕೆಯಲಿ?

ಸೋಮವಾರ, ಆಗಸ್ಟ್ 1, 2011

ಮೌನ

ಇಂದೇಕೋ ಎಲ್ಲವೂ ಗೌಣ
ಕಣ್ಣಿನ ಮಾತನು ಅರಿವ ಮನವಿದ್ದರೂ ಬೇಡವಾದ ಗಾನ

ಬೇರೆ ನೋವಿಗೆ ಎಡೆ ಮಾಡದೆ ಇರುವ ನಿರ್ಭಾವುಕ ಯಾನದ ಕಾರಣವ ಹುಡುಕ ಹೊರಟರೆ ಎಲ್ಲವೂ ಹಳೆಯವೇ, ಹೊಸದೇನು ಇಲ್ಲವೇ?
ಬೇಸರಕ್ಕೂ ಬೇಸರಿಕೆ ಮೂಡಿಸಿದೆನೆ ನಾನು?

ಅರ್ಥವಿರದ ಕನಸೊಂದು ಕಾಡಿದೆ, ನಾನು ಇಂದಿನವಳಲ್ಲ ಎಂದು ಅದೇ ಸಾರಿದೆ
ಅದೇ ಪಾತ್ರಗಳು ಮರುಕಳಿಸಿವೆ ಇಲ್ಲಿಯೂ, ಬೇರೆ ಹೆಸರಿನಲ್ಲಿ, ಬೇರೆ ಧಾವಿನಲಿ

ಕೂಡುವ ಕಳೆಯುವ ಲೆಕ್ಕ್ಹವೇ ಬೇಡ,
ಮೌನದಾಚೆಯ ಮೌನವ ಬಯಸಿ ನಾನೊಬ್ಬಳೆ ಹೋಗಲಾರೆನೆ ಸಾಗರದ ಅಂಚಿನಲ್ಲಿ ಕೂತು ಅಲೆಗಳ ನೋಡಲು?

ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಮತ್ತೊಂದು ನೋವು ಮೈ ಮನಸ್ಸನ್ನು ತುಂಬುತ್ತೆ
ನಿರರ್ಥಕ ಪ್ರಯತ್ನಗಳ ಮಡುವಿನಲ್ಲಿ ಇನ್ನೂ ನಡೆಯುತ್ತಲೇ ಇದ್ದೇನೆ, ಎನಿತು ಸಿಕ್ಕೀತು ನನಗೆ ಮುಕ್ತಿ?

ಬುಧವಾರ, ಜೂನ್ 8, 2011

ಭಾವ ಗೀತೆ ೧೦ - ಭಾವ ಭೃಂಗ


ಭಾವ ಭೃಂಗ ಹೂದೋಟದ ಬೇಲಿಯ ದಾಟಿ ಬಾರೋ ನನ್ನೆದೆ ಬಳಿಗೆ ||೨||
ಹೂವು ಸಾವಿರ ಹಾದಿ ತಪ್ಪಿದರು ಕೇಳುತಿರಲಿ ಮೊರೆ ಕಿವಿಯೊಳಗೆ ||೨||

ಹೂಗಳ ಹೂನಗೆಗೆದೆಗೆಡಬೇಡ ಕಂಪಿನ ಕುಣಿಕೆಗೆ ಸಿಲುಕದಿರು ||೨||
ಯಾರೇ ಕೇಳಲಿ ಎಷ್ಟೇ ಕಾಡಲಿ ||೨||
ನಲ್ಲೆಯ ಹೆಸರನು ಹೇಳದಿರು ||೨|| ||ಭಾವ ಭೃಂಗ||

ಧವಳ ನೀಲಿ ಕನಕಾಂಬರಿ ಕೆಂಪು ಹೂದೋಟದ ಕಿರು ಹಾದಿಯಲಿ ||೨||
ಸೇವಂತಿಗೆ ಮಲ್ಲಿಗೆ ಮಂದಾರ ||೨||
ಸಾವಿರ ಹೆಸರಿವೆ ಯಾದಿಯಲಿ||೨|| ||ಭಾವ ಭೃಂಗ||

ಹೂವು ಹಲವು ದುಂಬಿಯು ಹಲವು ಆದರೆ ಏಕಾಂಗಿ ನನ್ನೊಲವು ||೨||
ಬಂದರೆ ನೀನು ನನ್ನೆಲೆ ಮನೆಗೆ ||೨||
ಚಂದ್ರೋದಯ ಅರೆ ಕ್ಷಣದೊಳಗೆ||೨|| ||ಭಾವ ಭೃಂಗ||

ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ 

ಶುಕ್ರವಾರ, ಮೇ 6, 2011

ಮಕ್ಳು ಯಾಕೆ ಬೇಕು?

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ.... ಇದೇನು... ಯಾವ್ದೋ ಹಾಡೋ ಎಲ್ಲೋ ಅಂತ ಯೋಚನೆನ?? ಆ ಒಂದು ಸಾಲು ಮಾತ್ರ ಈಗ ಇಲ್ಲಿಗೆ ಅನ್ವಯಿಸುತ್ತೆ... ಹೀಗೆ ನನ್ನ ಸ್ನೇಹಿತರೊಬ್ಬರ ಹತ್ರ ಮಾತಾಡೋವಾಗ ಈ ವಿಚಾರ ತಲೆಗೆ ಬಂತು ನೋಡಿ... ತಲೆಗೆ ಬಂದಿದ್ದನ್ನ ಬರೀಬೇಕಲ್ವಾ?? ಅದ್ಕೆ... ನಿಮ್ ತಲೆಗೂ ಸ್ವಲ್ಪ ಹುಳ ಬಿಡೋಣ ಅಂತ... ಈಗ ನನ್ ತಲೆಗೆ ಬಂದಿದ್ದು ಏನು ಅಂದ್ರೆ... ಮಕ್ಳು ಯಾಕೆ ಬೇಕು??? ದೇವ್ರು ಕೊಡ್ತಾನೆ ಅದ್ಕೆ... ಅಂತ ಅಂದ್ರು ಇನ್ನೊಬ್ರು ಯಾರೋ... ಅವ್ರು ಇವ್ರು ಹೇಳಿದ್ದಲ್ಲ... ನಮಗೇನು ಅನ್ಸತ್ತೆ ಅನ್ನೋದು ಮುಖ್ಯ ಅಲ್ವಾ?? ಅದ್ಕೆ ಸ್ವಲ್ಪ ವಿಚಾರ ಮಂಥನ ಮಾಡೋಣ ಬನ್ನಿ...

ನಮಗೆ ನಿಮಗೆ...
ಯಾರಿಗೆ ಆಗ್ಲಿ ಮದುವೆ ಆಗಿ ೨ ತಿಂಗಳ ಮೇಲೆ ಎಲ್ಲಿ ಹೋದರು ಆಗೋ ಅನುಭವಗಳಲ್ಲಿ ಒಂದು... "ಏನು ವಿಶೇಷ ಇಲ್ವಾ" ಅಂತ ಜನ ಕೇಳೋದು.. ಬೇರೆ ಯಾರೋ ಯಾಕೆ.. ನಾನೇ.. ನನ್ನ ಬಿಟ್ಟು ಬೇರೆ ಎಲ್ರುನ್ನು ಕೇಳ್ತೀನಿ... ಯಾಕೆ ಮಕ್ಕಳಿಗೆ ಇಷ್ಟು ಪ್ರಾಮುಖ್ಯತೆ?? ಯೋಚಿಸ್ತಾ ಹೋದ್ರೆ ಎಷ್ಟೋ ವಿಚಾರ ತಲೆಗೆ ಬರ್ತಾ ಹೋಗತ್ತೆ...

ಮದುವೆ ಆಗೋದು ಹೆಚ್ಚಿನಂಶ ಬೇರೆಯೋರಿಗೊಸ್ಕರಾನೆ ಅನ್ನೋದು ನನ್ನ ಹಲವಾರು ಅಭಿಪ್ರಾಯಗಳಲ್ಲಿ ಒಂದು... ಕೆಲವರು ಮಾತ್ರ ಅವರಿಗಾಗಿ ಮದುವೆ ಆಗ್ತಾರೆ... ಇದ್ರಲ್ಲಿ ಅನಿವಾರ್ಯತೆಗಳಿಂದ ಮದ್ವೆ ಆಗೋರು ಇದಾರೆ.. ಅದೆಲ್ಲ out of topic ಬಿಡಿ.. general ಆಗಿ ಏನಾಗುತ್ತೆ ಅನ್ನೋದರ ಬಗ್ಗೆ ಮಾತಾಡೋಣ... ಯಾರೋ ಹೊರಗಿನೋರು ಮನೇಲಿ ಕೇಳ್ತಾರೆ.."ಏನ್ರಿ ನಿಮ್ ಮಗಳ ಮದ್ವೆ ಯಾವಾಗ ಮಾಡ್ತೀರ" ಅಪ್ಪ ಅಮ್ಮಂಗೆ ಅಷ್ಟು ಕೇಳಿದ್ದೆ ತಡ... ಇಷ್ಟ ಇದ್ರೂ.. ಇಲ್ದೆ ಇದ್ರೂ... ಮದುವೆಗೆ ಗಂಡು ಹುಡುಕಲಿಕ್ಕೆ ಶುರು ಮಾಡೇ ಬಿಡ್ತಾರೆ... ಸರಿಯಾದ ಗಂಡು ಸಿಕ್ತಾನೆ... ಸಾಲಾನೋ ಸೋಲಾನೋ ಮಾಡಿ (ಮೊದಲೆಲ್ಲ ಹುಡುಗಿ ಅಪ್ಪ ಸಾಲ ಮಾಡ್ತಾ ಇದ್ರೂ.. ಈಗ ಹುಡ್ಗ ಕೂಡ ಸಾಲ ಮಾಡ್ಕೋತಾನೆ ಮದ್ವೆ ಮನೆ ಅಂತ ಖರ್ಚು ಅವನಿಗೂ ಇರತ್ತಲ್ಲ )... ಹೀಗೆ ಊರೊರ್ನೆಲ್ಲ ಕರ್ದು ಮದುವೇನು ಮಾಡ್ತಾರೆ..... ಆಮೇಲೆ ಎರಡೇ ತಿಂಗಳು... ಆ ಹುಡುಗ ಹುಡುಗಿ ಹೇಗೋ ಕಷ್ಟ ಪಟ್ಟು.. ಒಬ್ರನ್ನೋಬ್ರನ್ನ ಅರ್ಥ ಮಾಡ್ಕೊಂಡು ಸಂಸಾರದಲ್ಲಿ ಸರಸ ವಿರಸಗಳನ್ನ ನೋಡಕ್ಕೆ ಶುರು ಮಾಡ್ತಾರೋ ಇಲ್ವೋ... ಮತ್ತೆ ಊರೋರ entry ಶುರು "ಏನ್ರಿ ನಿಮ್ ಮಗಳು ಏನಾದ್ರೂ ವಿಶೇಷಾನ??", "ಏನ್ರಿ ನಿಮ್ ಸೊಸೆ ಏನಾದ್ರೂ ವಾಂತಿ ಮಾಡ್ಕೊಂಡ್ಲ". ಯಾಕಪ್ಪ ಬೇಕು ಇವರಿಗೆ?? ಸುಮ್ನೆ ಇರೋ ಅಪ್ಪ ಅಮ್ಮ ಕೂಡ ಕೇಳೋ ಹಾಗೆ ಮಾಡ್ತಾರೆ... ಮೊದ್ಲೇ ಎಲ್ಲ ಕಡೆಗಳಿಂದ ಸಾಲ ಮಾಡಿರ್ತಾರೆ... ಮತ್ತೆ ಖರ್ಚು.. ಇನ್ನೊಂದ್ ಸ್ವಲ್ಪ ದಿನ ಹೋಗ್ಲಿ... ಏನು ಇಲ್ಲ.... ಸುಮ್ನೆ ಕೇಳೋದು... ಪಾಪ ಅದ್ಕೆ ಅವ್ರು ಹೆದ್ರುಕೊಂಡು ಸಂಸಾರದಲ್ಲಿ ಸಾರ ಇದೆ ಅಂತ ತಿಳ್ಕೊಳ್ಳೋಕೆ ಮುಂಚೆನೇ ಅಪ್ಪ ಅಮ್ಮನು ಆಗ್ತಾರೆ... ಮಕ್ಕಳನ್ನ ಕಷ್ಟ ಪಟ್ಟು ಸಾಕಿ ಸಲಹಿ... ಕೊನೆಗೆ ಅವ್ರ ಬಾಳ ತುಂಬಾ ಮಕ್ಳೆ ತುಂಬಿರ್ತಾರೆ... ಯಾಕೆ ಅವ್ರು ಮಕ್ಳು ಮಾಡ್ಕೊಂಡ್ರು ಅಂತ ಅವ್ರಿಗೆ ಅರಿವಿಗೆ ಬರಲ್ಲ... ಪಾಪಾ....

ಹೀಗೆ ಮೇಲೆ ಹೇಳಿದ ಮಾತೆಲ್ಲ ತಮಾಷೆಗಾಗಿ ಅಷ್ಟೇ... ಇದು ಎಷ್ಟೋ ಮನೆಗಳಲ್ಲಿ ನಡಿಯುತ್ತೆ ಕೂಡ... ಆದ್ರೆ ಅಲ್ಲಲ್ಲಿ ಕೆಲವು ಬದಲಾವಣೆಗಳು ಇರತ್ತೆ... ಅದೆಲ್ಲ ಪಕ್ಕಕ್ಕೆ ಇಡೋಣ... ಈಗ ನನ್ನ ಈ ವಿಚಾರ ಮಂಥನದ ತಲೆ ಬರಹದ(headline ) ಬಗ್ಗೆ ಸ್ವಲ್ಪ serious ಆಗಿ ಯೋಚನೆ ಮಾಡೋಣ.. ಯಾಕೆ ನಮಗೆ ಮಕ್ಳು ಬೇಕು??... ನಮ್ಮ ಹೀರಿಯೋರನ್ನ ಕೇಳಿದ್ರೆ ಹೇಳ್ತಾರೆ... ವಂಶ ಬೆಳೆಸೋಕ್ಕೆ.. ನಾಳೆ ನಮ್ಮ ಹೆಸರನ್ನ ಹೇಳೋಕ್ಕೆ ಒಂದು ಬೇಕು ಕಣೆ... ೧ ವರ್ಷ ೨ ವರ್ಷಾ ಆದರು ಮಕ್ಕಳು ಆಗ್ಲಿಲ್ಲ ಅಂದ್ರೆ.. ಆಗೇನು ಮಾಡ್ತೀಯ.. ಇನ್ನೂ ಹಲವಾರು ಉತ್ತರ ಕೊಟ್ಟು.. ಈಗಿನ ಕಾಲದೊರಿಗೆ ಮಕ್ಳೆ ಬೇಡವಂತೆ... ನಮಗೊಂದು ಮೊಮ್ಮಗು ಬೇಡ್ವ... ಇನ್ನೂ ಏನೇನೋ... ಆದ್ರೆ ಆ ಉತ್ತರ ನಂಗೆ ಅಷ್ಟು ಸರಿ ಅನ್ನಿಸಲಿಲ್ಲ... ನಿಜ.. ಅವ್ರಿಗೆ ಮೊಮ್ಮಗು ಬೇಕು.. ಅವ್ರಿಗೆ ನಾವು ಖುಷಿ ಕೊಡ್ಬೇಕು... ಆದ್ರೆ ಅದಕ್ಕೆ.. ನಾವು ಮದುವೆಯ ರೀತಿ ನೀತಿ.. ಒಬ್ಬ್ರಿಗೊಬ್ರು ಅನುಸರಣೆ ಮಾಡಿ ಹೇಗೆ ಜೀವನಾನ ಸರಿಯಾಗಿ ನಡೆಸಿಕೊಳ್ಳೋದು ಅಂತ ತಿಳ್ಕೊಳ್ಳೋಕೆ ಮುಂಚೆನೇ ಮಕ್ಳು ಬೇಕಾ??

ಈಗಿನ ಹುಡ್ಗೀರು house wife ಆಗಿ ಇರೋದು ತುಂಬಾ ಕಡಿಮೆ.. ಅಷ್ಟು ಓದಿ.. ಒಳ್ಳೆ ಕಂಪನಿಲಿ ಕೆಲಸ ಮಾಡ್ತಾ.. ತನ್ನ ಕಾಲ ಮೇಲೆ ತಾನು ನಿಲ್ಲೋ ತವಕದಲ್ಲಿ.. ಮನೆ ಕೆಲಸ ಕಲಿತವರು ಕಡ್ಮೆನೆ... ಮದುವೆ ಆದ ಮೇಲೆ ಹೇಗೂ ಮಾಡಬೇಕಲ್ಲ ಅಂತ ಮನೇಲೂ ಅಷ್ಟು ಬಲವಂತ ಮಾಡಿರಲ್ಲ.. ಹೀಗಿರೋವಾಗ ಅವಳಿಗೆ ಮನೆ ಕೆಲಸ ಅಡುಗೆ ಎಲ್ಲ ಕಲ್ತು office ಗೆ ಕೂಡ ಹೋಗಿ, ಗಂಡನ ಬೇಕು ಬೆದಗಲೇನು ಅಂತ ತಿಳ್ಕೊಂಡು. ಇದೆಲ್ಲ ಕಲಿಯೊಕ್ಕೆ ೧ ವರ್ಷ ಕಾಲ ಬೇಕು... house wife ಆಗಿರೋರಿಗೂ ಇದೆ ಅನ್ವಯಿಸುತ್ತೆ... office ಗೆ ಹೋಗೋದು ಒಂದಿರಲ್ಲ... ಆದರೂ ಮನೆ ಕೆಲಸ ಮಾಡೋದು ಅಷ್ಟೇನೂ ಸುಲಭ ಅಲ್ಲ.. (ಅಮ್ಮನ್ದ್ರು ಮಾಡೋವಾಗ ಗೊತ್ತಾಗ್ತಾ ಇರೋಲ್ಲ) . ಹೀಗೆ ಹತ್ತು ಹಲವು ನಿಭಾಯಿಸೋದು ಕಲಿಯೊಕ್ಕೆಇಡೀ ಹಿಡಿಯುತ್ತೆ.... minimum grace time .. ಒಂದು ವರ್ಷ ಅಂತ ಇಟ್ಕೊಳ್ಳೋಣ... ಅಷ್ಟರಲ್ಲಿ ಮಕ್ಳು ಆಗೋದ್ರೆ.. ಇದೆ ಗೊತ್ತಿಲ್ದೆ ಇರೋರು ಇನ್ನೂ ಮಗುನ ನೋಡ್ಕೊಳ್ಳೋದು ಇನ್ನೂ ಕಷ್ಟ ಆಗಲ್ವಾ?? ಅದು ದೊಡ್ದದಾ ಮೇಲೆ ಸಾಕೋದು ಸಲಹೋದು ಪಕ್ಕಕ್ಕಿಡೋಣ ತಮ್ಮ ವಯ್ಯಕ್ತಿಕ ಬೆಳವಣಿಗೆ ಬೆಳೆಸಿಕೊಳ್ಳದೆ ಮಗುಗೆ ಉತ್ತಮ ಆಹಾರ ಯಾವ್ದು.. ಏನು ಮಾಡಿದ್ರೆ ನನ್ನ ಮಗು ಖುಷಿಯಾಗಿರತ್ತೆ ಅಂತ ಯೋಚಿಸೋಕೆ.. ಮನೆಯ ಬೇರೆ ಯೋಚನೆಗಳು ಇರಬಾರದಲ್ವೆ?? ಸಾರು ಮಾಡೋಕೆ ಬರ್ದೇ ಸಾಂಬಾರು ಕಲಿಯೋದು ಹೇಗೆ??

ಈ ಮೇಲಿನದ್ದೆಲ್ಲ ಒಂದು ಕೋನದ ವಿಚಾರ... ಸರಿ ಒಂದೆರಡು ವರ್ಷ ಮಕ್ಳು ಆಗ್ಲಿಲ್ಲ ಅಂದ್ರೆ.. ಆಗಂತೂ ಇನ್ನೂ ಸರಿ... ಮತ್ತೆ ಬೇರೆಯೋರ entry .. ಯಾಕೆ ಏನಾಯ್ತು... ಈ doctor ಹತ್ರ ಹೋಗಿ.. ಆ ಮದ್ದು ಮಾಡ್ಸಿ... ಆ ದೇವರಿಗೆ ಹರಕೆ ಹೊತ್ತ್ಕೊಳ್ಳಿ...ಬಿತ್ತಿ ಸಲಹೆಗಳ ಮಹಾ ಪೂರಣೆ ಬರತ್ತೆ.... ಮಕ್ಳು ಆಗಿಲ್ಲ ಅನ್ನೋ ಚಿಂತೇನೆ ಅವರನ್ನ ತಿಂತಾ ಇರತ್ತೆ... ಮಧ್ಯದಲ್ಲಿ ಈ ಮಾತುಗಳು.. ಅವರನ್ನ ಕುಗ್ಗಿಸಿ ನಮ್ಮಲ್ಲೇನೋ ದೋಷ ಇದೆ ಅಂತ ಅವರನ್ನ ಇನ್ನೂ ಖಿನ್ನಿಸುತ್ತೆ..(ಹಲವಾರು ಸಂಶೋಧನೆ ಪ್ರಕಾರ ಹೀಗೆ ಮಾನಸಿಕವಾಗಿ ಕುಗ್ಗಿದಷ್ಟು ಮಕ್ಕಳು ಆಗೋ ಸಾಧ್ಯತೆ ಕೂಡ ಕಡಿಮೆ ಆಗ್ತಾ ಹೋಗತ್ತಂತೆ) ಇಲ್ಲೂ ಕೂಡ ನಮಗೂ ಮಕ್ಕಳು ಆಗತ್ತೆ ಅಂತ ತೋರ್ಸೋಕೆ ಮಕ್ಕಳು ಬೇಕು... ನಂಗಂತೂ ಸರಿಯಾದ ಉತ್ತರ ಸಿಗ್ಲಿಲ್ಲ...

ಸ್ವಲ್ಪ ಕಾವ್ಯಮಯ ರೀತಿಯಲ್ಲಿ ಯೋಚಿಸಿದರೆ...

ನಲ್ಲ ನಲ್ಲೆಯ ಮಿಲನ ಮಹೋತ್ಸವದ ಗುರುತಾಗಿ ಸಿಕ್ಕ ಉಡುಗೊರೆ...
ಬಾಳಾ ಬೆಳಗುವ ದೀಪಿಕೆಯು ಮಡಿಲಲ್ಲಿ ನಗುವಾಗ,
ಅದರ ಧರೆಗಿಳಿಸಲು ತಾ ಪಟ್ಟ ಕಷ್ಟಗಳ ಅಲ್ಲಗೆಳೆದು
ಅದರ ನಗುವಲ್ಲಿ ನಗುವಾಗಿ
ಬದುಕಿನ ಸಾರ್ಥಕತೆಯ ಭಾವದಲಿ ನಲಿಯುವಳು ತಾಯಿ...

ಮುಡಿಗೊಂದು ಹೂವು ಮನೆಗೊಂದು ಮಗುವು..
ತಮ್ಮ ನಗುವ ಕಂಪನು ಸೂಸಿ
ನಾಲ್ಕು ಗೋಡೆಗಳ ಮನೆಯಾಗಿ ಮಾಡಿ...
ಅಂಗಳದ ತುಂಬೆಲ್ಲ ಆಟವಾಡು ಬಾ ಓ ಮುದ್ದು ಕಂದ

ಹೀಗೆ ಏನೇನೋ ಹೇಳಬಹುದು...

ಏನೇ ಆಗಲಿ.. ಆಗಿರಲಿ... ನನಗೆ ಅನ್ನಿಸೋದು... ಮಕ್ಕಳು ಬೇಕು... ಹುಡುಗ ಹುಡುಗಿ... ನಿಜವಾದ ಅರ್ಥದಲ್ಲಿ ಗಂಡ ಹೆಂಡತಿ ಆದಮೇಲೆ... ಹುಡುಗ ಗೆಳೆಯನಂತ ಗಂಡ ಆದಮೇಲೆ... ಹುಡುಗಿ ಗೆಳತಿಯಂಥ ತಾಯಿಯಂಥ ಹೆಂಡತಿಯಾದ ಮೇಲೆ... ಸಂಸರಾ ಪೂರ್ತಿಯಾಗಿಸಲು....ನಮ್ಮ ಹೆಸರನ್ನು ಹೇಳಲು.. ನಮ್ಮ ಅಪ್ಪ ಅಮ್ಮನನ್ನು ಅಜ್ಜ ಅಜ್ಜಿ ಆಗಿ promote ಮಾಡಲು...ದಿನಕ್ಕೊಂದು ಹೊಸ ಕಥೆ.. ಹೊಸ ಆಟ ಹುಡುಕಿ ಆಡಿ ನಮ್ಮನ್ನು ಮಕ್ಕಳನ್ನಾಗಿಸಿ..ಮುದ್ದು ಮುದ್ದು ಮಾತನಾಡಿ... ನಕ್ಕು ನಗಿಸಿ... ಈ ಚಕ್ರ ಹೀಗೆ ಸಾಗಲು... ಬದುಕಿನ ಸಾರ್ಥಕತೆಗೆ... ನಮ್ಮಿಂದ ಇನ್ನೊಂದು ಜೀವ ಬಂದು ಬೆಳೆದು ಜೀವಕ್ಕೆ ಜೀವವಾಗುವ ಭಾವವ ನಮ್ಮಲ್ಲಿ ಮೂಡಿಸಲು... ಪ್ರೀತಿ ಎಂಬ ಭಾವನೆಯ ಹಂಚಿ ಹೆಚ್ಚಿಸಲು...ಅಪ್ಪ ಅಮ್ಮ ಅನ್ನಿಸಿಕೊಳ್ಳುವ ಭಾವಕ್ಕೆ ಮಕ್ಕಳು ಬೇಕು... ಏನಂತೀರ???

ಸೋಮವಾರ, ಮೇ 2, 2011

ಭಾವಗೀತೆ ೯ - ಕಾಣದ ಕಡಲಿಗೆ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ ಕಡಲನು
ಕೂಡಬಲ್ಲೆನೆ ಒಂದು ದಿನ || ಕಾ ||

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||

ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ ||


ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್.

ಗುರುವಾರ, ಏಪ್ರಿಲ್ 28, 2011

ನಾನು ಮತ್ತು ನನ್ನ ಏಪ್ರಿಲ್ ತಿಂಗಳಿನ ಅನುಭವಗಳು...

ಈ ವರ್ಷದ ಏಪ್ರಿಲ್ನಷ್ಟು ಕೆಟ್ಟ ಮಾಸ ನನಗೆ ಯಾವ್ದು ಇರ್ಲಿಲ್ವೇನೋ... ದೇವರು ಕಷ್ಟ ಕೊಟ್ರೆ ಒಂದರ ಹಿಂದೆ ಇನ್ನೊಂದು ಕೊಡ್ತಾನೆ ಅನ್ನೋಕೆ ಈ ನನ್ನ ಕಥೆ ಎಷ್ಟನೆ ಸಾಕ್ಷಿನೋ ಆ ದೇವರಿಗೆ ಗೊತ್ತು.. ಕಥೆ ಕೇಳಿ...

ನನ್ನ BFA assignments ಏಪ್ರಿಲ್ನಲ್ಲಿ submit ಮಾಡ್ಬೇಕು ಅಂತ college ಇಂದ ಹೇಳಿದ್ರು... ನಾನು ಬಹಳ ತರಾತುರಿಯಲ್ಲಿ ಮಾಡ್ತಾ ಇದ್ದೆ... office ಲಿ ಇದ್ರೆ ಯಾವಗಪ್ಪ assignment ಮಾಡೋದು ಅನ್ನೋ tension... ಇವತ್ತು ಮುಗಿಸಬೇಕು.. ಇನ್ನೆರಡು ದಿನಕ್ಕೆ ಮುಗಿಸಬೇಕು ಅಂತ.. ಅಂತು ಇಂತೂ submit ಮಾಡಕ್ಕೆ 2 ದಿನ ಮುಂಚೆ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟೆ...ಮೈಸೂರಿಗೆ ಹೋಗಕ್ಕೆ packing ಎಲ್ಲ ಆಯ್ತು... ಪುತ್ತೂರು ಜಾತ್ರೆ ನೋಡಿಕೊಂಡು ಹಾಗೆ ನನ್ನ ಗೆಳತಿ ರಚನಾ ಜೊತೆ ಮೈಸೂರ್... 10 ದಿನ office ಮನೆ ಅಡುಗೆ ಏನು ಇಲ್ಲ... ಅಬ್ಬಬ್ಬ್ಬ.. ನನ್ನ ಖುಷಿಗೆ ಎಲ್ಲೇನೆ ಇಲ್ವೇನೋ ಅನ್ನೋಷ್ಟು ಸಂತಸ... ಅಷ್ಟೇ ನನ್ನ ಪಾಲಿನ ಖುಷಿ ಅನ್ಸುತ್ತೆ... ಆಮೇಲೆ ಏನಾಯ್ತು ಕೇಳಿ..

ಪುತ್ತೂರು ಜಾತ್ರೆ ಇದೆ ಅಂತ ಒಂದು ತಿಂಗಳು ಮುಂಚೆನೇ ನನ್ನ ಮತ್ತು ನನ್ನವರ ಹೆಸರಲ್ಲಿ train ticket book ಮಾಡಿದ್ವಿ.. ಅದ್ನ book ಮಾಡ್ಸಕ್ಕೆ ನನ್ನವರನ್ನ ಎಷ್ಟು ಪೀಡಿಸಿದ್ನೋ ಏನೋ... ಕೊನೆಗೂ ನಾವು ಹೊರೋಡೋ ದಿನ ಘಳಿಗೆ ಎಲ್ಲ ಬಂತು... ಹೊರಟ್ವಿ... ಮಳೆ... ಬರೋದಿಲ್ಲ ಅನ್ನೋ ಧ್ಯರ್ಯದಲ್ಲಿ ಮನೆ ಇಂದ ಹೊರಗೆ ಕಾಲಿಟ್ಟಿದ್ದೆ ತಡ.. ಶುರು ಆಯ್ತು ನೋಡಿ... ಸರಿ ಮನೆ ಬೀಗ ತೆಗೆದು ಕೊಡೆ ತೊಗೊಂಡು ಆಟೋ ಹಿಡಿದು ಹೊರಟ್ವಿ... ಹೋಗ್ತಾ ಹೋಗ್ತಾ train ಎಲ್ಲಿ miss ಆಗತ್ತೋ.. ಮತ್ತೆ tension... ಚಿತ್ರಕಲ ಪರಿಷತ್ ತನಕ ಆಟೋ ಬಂತು... ತಕ್ಷಣ ನನಗೆ ಹೊಳೆದದ್ದು... ಕೊಡೆ ತೊಗೊಳ್ಳೋ ಆತುರದಲ್ಲಿ assignment book ಮನೇಲೆ ಮರೆತೇ... ಅಳು ಬಂದೆ ಬಿಡ್ತು.. ಥು.. ನನಗೇನಾಗಿದೆ ಅಂತ ನನ್ನ ನಾನು ಎಷ್ಟೋ ಬ್ಯೆಕೊಂಡೆ.... ನನ್ನವರು ಸಮಾಧಾನ ಮಾಡಿದ್ರು... train miss ಆದರು ತೊಂದರೆ ಇಲ್ಲ ಮನೆಗೆ ಹೋಗಿ book ತೊಂಗೊಂಡು busಲ್ಲೇ ಹೋದ್ರೆ ಆಯ್ತು ಅಂತ ವಾಪಸ್ ಬಂದ್ವಿ... bus stand ಗೆ ಹೋದ್ರೆ ಯಾವ ಪುತ್ತೂರು busಲ್ಲು seat ಖಾಲಿ ಇಲ್ಲ... ಕೊನೆಗೆ ಮಂಗಳೂರಿನ ಯಾವ್ದೋ volvo ಲಿ VIP seat ಕೊಟ್ರು.. VIP seat... ಪರವಾಗಿಲ್ಲ ನಮ್ ಟೈಮ್ ಅಷ್ಟೊಂದು ಕೆಟ್ಟಿಲ್ಲ ಅಂತ ಹಾಯಾಗಿ ಮಲಗಿದೆವು... ಬೆಳಗ್ಗೆ 5.30ಗೆ ಎಚ್ಚರ ಆಗಿ ನೋಡಿದರೆ... BC road.. ನಾವು ೧ ಗಂಟೆ ಮುಂಚೆನೆ ಇಳಿ ಬೇಕಿತ್ತು... ಅಯ್ಯೋ ಹತ ವಿಧಿಯೇ ಅಂತ ಅಲ್ಲೇ ಇಳಿದು ಪುತ್ತೂರಿಗೆ ಹೋಗೋ KSRTC bus ಗಾಗಿ ಕಾದು... ಕೊನೆಗೂ ಒಂದು bus ಬಂತು.. ಹತ್ತಿ ಮನೆಗೆ ಹೋಗಿ ಬೀಳುವಷ್ಟರಲ್ಲಿ ಸುಸ್ತಾಗಿತ್ತು... ಆದರೂ ಏನೋ ಹುರುಪು... ಜಾತ್ರೆ ಅಲ್ವಾ... ಅವತ್ತು ಮಹಾಲಿಂಗೇಶ್ವರ ದೇವಸ್ತಾನಕ್ಕೆ ಭಂಡಾರ ತರುವ ದಿನವಂತೆ.... ಅದ್ಧೂರಿಯಾಗಿತ್ತು.. ರಾತ್ರಿ ಹೋಗಿ.. ಚುರಮುರಿ ಐಸ್ ಕ್ರೀಂ.. ಎಲ್ಲ ತಿಂದು... ಇದ್ದ ಬದ್ದ ಅಂಗಡಿ ಎಲ್ಲ ಸುತ್ತಾಡಿ... 12 ಗಂಟೆಗೆ ಮನೆಗೆ ಹಿಂತುರಿಗಿ ಹಾಯಾಗಿ ಮಲಗಿದೆವು...

ಮರುದಿನ ನಾನು ಮೈಸೂರ್ ಗೆ ಹೊರಟೆ... ನನ್ನ ಪ್ರೀತಿಯ ಮಾವ ವಿಷು ಹಬ್ಬದ ಪ್ರಯುಕ್ತ ಸೀರೆ ಕೊಟ್ರು... ನನಗಂತೂ ಖುಷಿಯೋ ಖುಷಿ... ಎಲ್ಲರಿಗೂ ನಮಸ್ಕಾರ ಮಾಡಿ ಉಪ್ಪಿನಂಗಡಿಗೆ ಹೋದ್ವಿ... bus ಬಂತು.. ನನ್ನ ಗೆಳತಿ ರಚನಾ ನಗು ಮುಖದೊಂದಿಗೆ ನನ್ನ ನೋಡಿ ಹತ್ತು ಅಂದ್ರು.. ನನ್ನ ಗಂಡನಿಗೆ ta ta ಹೇಳಿ ಹೊರಟೆವು... bus ಗುಂಡ್ಯ ತಲುಪಿತೋ ಇಲ್ವೋ.. accell belt ಕಟ್ಟಾಗಿ ಕಾಡಿನ ಮಧ್ಯ tussss.... ಅಂತ ನಿಂತೆ ಹೋಯ್ತು.... ಸರಿ ನಮಗೂ ಖುಷಿ ಆಯ್ತು... ಸ್ವಲ್ಪ ಹೊತ್ತು ಅಂತ ಅಲ್ಲಿ ಇಲ್ಲಿ ಓಡಾಡಿ ಸ್ವಲ್ಪ ಚಿತ್ರ ಬಿಡಿಸಿ.. ರವಿ ಅಣ್ಣ ಮಾಡಿದ್ದ 7cup ಸ್ವೀಟ್ ತಿಂದು... ಕಾದ್ವಿ ಕಾದ್ವಿ... ಯಾವ ಮೈಸೂರ್ bus ಪತ್ತೇನೆ ಇಲ್ಲ... ಹಾಗೆ 2 ಗಂಟೆ ಕಳೆದ ಮೇಲೆ ರಾಜಹಿಂಸೆ bus ಬಂತು... ಆದ್ರೆ seat ಇಲ್ಲ :( ಸರಿ ಇನ್ನೇನ್ ಮಾಡೋದು... ಹಾಸನದ ತನಕ ನಿಂತುಕೊಂಡೆ ಶಿರಾಡಿ ಘಾಟ್ ಸಕಲೇಶಪುರ ಎಲ್ಲ ಇಳಿದೆವು... ಊಟ ಇಲ್ಲ ನಿದ್ರೆ ಇಲ್ಲ... seat ಕೂಡ ಇಲ್ಲ.... ಮೈಸೂರ್ ತಲುಪವ ಹೊತ್ತಿಗೆ ಪ್ರಾಣ ಗಂಟಲಲ್ಲಿ ಇತ್ತು... ಮೈಸೂರ್ಗೆ ಬಂದ ಮತ್ತೆ KSOU hostel ಇದೆ... ಆರಾಮಾಗಿ ಸ್ನಾನ ಮಾಡಿ ಮಲಗಬಹುದು ಅನ್ನೋ ಮಹದಾಸೆ ನಮ್ಮದು... ಅಲ್ಲಿ ನೋಡಿದರೆ ರೂಂ ಇಲ್ಲ... ಅಲ್ಲದೆ ಆ warden ನ ಕಿತ್ತೋಗಿರೋ ಒಂದು sentense "I M not helpless"(i M helpless ಅನ್ನೋಕೆ ಹಾಗಂದಿದ್ದು ಅವ್ನು..ನಮ್ಮ government ಗತಿ ಇದು.. ಲಂಚ ಕೊಟ್ರೆ ಎಂಥ ಕಿತ್ತೊಗಿರೋನು ಏನ್ ಬೇಕಾದರು ಆಗ್ತಾ ಅನ್ನೋಕೆ ಉದಾಹರಣೆ) ಇವನ ಮುಖ ಮುಚ್ಚ ಅನ್ನೋದೊಂದು ಬಾಕಿ.... ನಮ್ಮನ್ನೇ ನಾವು ಶಪಿಸುತ್ತ... PG ಗಾಗಿ ಹುಡುಕಾಟ ಶುರು ಆಯ್ತು... ಒಂದು PG ಲಿ ವಾಸನೆ ಆದ್ರೆ ಇನ್ನೊಂದರಲ್ಲಿ ಜಾಗನೇ ಇಲ್ಲ... ಮತ್ತೊಂದು ಮೋರಿ ಪಕ್ಕ... ಅಂತು ಇಂತೂ ೮ ಗಂಟೆಗೆ PG ಸಿಕ್ತು ಊಟ ತಿಂಡಿ ಎಲ್ಲ ಅಲ್ಲೇ ಇದೆ... ಸದ್ಯ ಪುಣ್ಯಾತ್ಮರು ಹೇಗೋ ಸಿಕ್ಕಿದ್ರಲ್ಲ ಅಂತ PG ಹೊಕ್ಕು ಮಲಗಿದ್ವಿ...

ನಂತರ ದಿನಕ್ಕೊಂದು ಮನಸ್ತಾಪ.. ಅವಳು bathroom ಒಳಗೆ ಹೋದ್ರೆ ಬರೋದೆ ಇಲ್ಲ... 5 minutes yar ಅಂತಲೇ ಅರ್ಧ ಗಂಟೆ ಮಾಡ್ತಾಳೆ... ಇವಳು ರಾತ್ರಿ light ಹಾಕ್ತಾಳೆ... ನನ್ ಗಂಡ phone ಮಾಡ್ಲಿಲ್ಲ... ನಿನ್ ಗಂಡ ಮಾಡಿದ್ನಾ.. ಇವತ್ತು ನಮ್ ಕ್ಲಾಸ್ ಹಿಂಗಾಯ್ತು... dean ಇದು ಅಂದ್ರು... ಸರ್ ಅದು ಅಂದ್ರು.. ಅನ್ನೋ ಮಧ್ಯೆ ಚಾಮುಂಡಿ ಬೆಟ್ಟಕ್ಕೆ ಹೊರಟ್ವಿ... ಬೆಟ್ಟಕ್ಕೆ bus enter ಆಯ್ತೋ ಇಲ್ವೋ.. ಮತ್ತೆ ಮಳೆ.... ಹತ್ತಿದ bus ಇಳೀದೇನೆ.. ಅಲ್ಲೇ ಮದ್ದೂರು ವಡೆ ತಿಂದು.. ಮೈಸೂರ್ ಗೆ ವಾಪಾಸ್ ಆಗಿ ಬೆಚ್ಚಗೆ ಮಲ್ಕೊಂಡೆವು....

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ಅನ್ಸೋಕ್ಕೆ ಶುರು ಆಯ್ತು ಎಲ್ಲರಿಗು.. ಗಂಡನ್ನ ನೋಡ್ಬೇಕು.. ಅಮ್ಮನ್ನ ನೋಡ್ಬೇಕು... ಒಬ್ಬೊಬ್ರೆ ಖಾಲಿ ಆಗ್ತಾ ಬಂದ್ರು... ಅಂತು ಇಂತೂ ಹೊರೋಡೋ ದಿನ... ಈಗ ಹೋಗಿ office ಮನೆ ಅಡುಗೆ ಅನ್ನೋ ಬೇಜಾರು ಒಂದು ಕಡೆ... ಸದ್ಯ ಮನೆಗೆ ಹೋಗ್ತಾ ಇದ್ದಿವಲ್ಲ ಅನ್ನೋ ಖುಷಿ ಇನ್ನೊಂದು ಕಡೆ ಇಟ್ಕೊಂಡು ರಾತ್ರಿ ಬಂದು ಮನೆಗೆ ಬಿದ್ವಿ....

ಇಷ್ಟೆಲ್ಲಾ ಆದದ್ದು ಕೇವಲ 12 ದಿನಗಳಲ್ಲಿ ಗೊತ್ತ??? ಈಗ ಹೇಳಿ ನನ್ನಂತೋಳಿಗೆ ಇಷ್ಟೆಲ್ಲಾ ಕಷ್ಟ ಆ ದೇವರು ಕೊಡಬಹುದ???

ಗುರುವಾರ, ಏಪ್ರಿಲ್ 14, 2011

ಭಾವಗೀತೆ ೮ - ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||

ಕಣ್ಣನೇ ತಣಿಸುವ ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ ಕಣ್ಣಾಗಿಸುವೀ ಕಿರಣಗಳು
ಮತ್ತದೇ ಹಸುರಿಗೆ ಹಸೆಯಿಡುತಿರುವೀ ಪದಗಾನ
ಚಿನ್ನ ನೀನಿಲ್ಲದೆ ದಿಂ ಎನ್ನುತಿದೆ ರಮ್ಯೋದ್ಯಾನ || ಮತ್ತದೇ ||

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ
ಮುತ್ತಿಗಾಲಸ್ಯವ ಬಿಗಿ ಮೌನವ ಹೊದೆದೂಡಿಸು ಬಾ
ಮತ್ತೆ ಸಮತೆಯ ಹಿರಿಬೇಲಿಯ ಸರಿ ನಿಲಿಸು ಬಾ || ಮತ್ತದೇ ||

ಶುಕ್ರವಾರ, ಏಪ್ರಿಲ್ 8, 2011

ಭಾವಗೀತೆ ೭ - ಬಾ ಇಲ್ಲಿ ಸಂಭವಿಸು

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ

ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗೀ...
ಮಣ್ಣಾಗಿ ಮರವಾಗಿ ಮಿಗವಾಗಿ ಕಗವಾಗಿ
ಭವ ಭವದಿ ಭತಿಸಿಹೇ ಭವತಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||

ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೇ..
ಮಣ್ಣ್ ತನಕೆ ಮರತನಕೆ ಮಿಗತನಕೆ ಕಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರ
ಮೂಡಿ ಬಂದೆನ್ನ ನರ ರೂಪ ಚೇತನದೀ
ಮೂಡಿ ಬಂದೆನ್ನ ನರ ರೂಪ ಚೇತನದೀ
ನಾರಯಣ ಪತ್ತೆ ದಾರಿ ದೂರ
ನಿತ್ಯವೂ ಅವತರಿಪ ಸತ್ಯಾವತಾರ || ಬಾ ಇಲ್ಲಿ ||

ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ಅಂದು ಅರಮನೆಯಲ್ಲಿ ಮತ್ತೆ ಸೆರೆಮನೆಯಲ್ಲಿ
ಅಲ್ಲಿ ಗೂಡುಕಟ್ಟಿಯಲಿ ಇಲ್ಲಿ ಕಿರುಗುಡಿಸಲಲಿ
ದೇಶ ದೇಶ ವಿದೇಶ ವೇಷಾಂತರವನಾಂತು
ವಿಶ್ವ ಸಾರಥಿಯಾಗಿ ನೀಯಾರದವನೆಂದು
ಛೋದಿಸಿರುವೆಯೊ ಅಂತರ್ಶುದ್ಧಿ ಲೋಲಾ...
ಅವತರಿಸು ಬಾ...
ಅವತರಿಸು ಬಾ...
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ರದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ

ಮಂಗಳವಾರ, ಮಾರ್ಚ್ 22, 2011

ನೀನು....

ಏನೂ ಬರೆಯಲು ತಿಳಿಯದಾಗ, ಏನೂ ಹೇಳಲೂ ತೋಚದಾಗ
ಕಣ್ಣ್ಮುಚ್ಚಿ ಕೂತೆ....
ನನ್ನಂತರಾಳದಾಲಿ ಸುಳಿದಾಡಿದ ನೀನು ಒಮ್ಮೆಲೇ ಬಂದು ನಿಂತೆ!!

ನಾಳೆ

ಮನದ ಮಾತಿದು ಯಾರಿಗೂ ತಿಳಿಸದ ಗುಟ್ಟು
ಆಸೆ ನಿರಾಸೆಗಳ ಬಿಡಾರದ ಗಂಟು

ಬೇಡವೆಂದರೂ ಬಿಡದ ನೆನಪುಗಳ ಜೋಳಿಗೆ
ಹತ್ತಿ ಕೂತು ಎಣಿಸಿದ ನಕ್ಷತ್ರಗಳ ಸುಂದರ ಮಾಳಿಗೆ

ಬೆಳಕು ಮೂಡಿ, ಹಗಲಿಡೀ ತಡಕಾಡಿ, ಇರುಳ ದೂಡಿ, ದಿನ ಕಳೆದರೂ,
ಕನಸಲ್ಲಾದರೊಮ್ಮೆ ನನ್ನ ಕಾಡಿ ಹೋಗುವ ನಿನ್ನೆಗೆ ಹೇಗೆ ತಿಳಿಸಲಿ?
ನಿನ್ನ ಬಿಟ್ಟು ಹೊಸ ಹಾದಿಯ ಹಿಡಿದಿಹೆನು, ನಾ ನಾಳೆಯ ಕಾದು ಕುಳಿತಿಹೆನು !!

ಭಾವಗೀತೆ ೬ - ಇಷ್ಟು ಕಾಲ ಒಟ್ಟಿಗಿದ್ದು

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ,
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರು ಉಳಿಯಿತೇ ಕನ್ನಡಿಯ ಪಾಲಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸೋಮವಾರ, ಮಾರ್ಚ್ 21, 2011

ಭಾವಗೀತೆ ೫ - ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ

ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ
ಎಲ್ಲಿರುವೆ ಹೇಳು ನೀ ನಿಜವೇ ನೆರಳೆ

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ ||೨||
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರು ಎಸೆದ ಕೋಗಿಲೆಯ ದನಿ ಹರಳಿನಂತೆ ||೨|| ಎಲ್ಲಿರುವೆ

ನಿನಗೆಂದೇ ನೆಲಬಾನು ಕೂಗಿ ಕರೆದೆ
ಹೊಲಕಾನು ಬನವೆಲ್ಲ ತಿರುಗಿ ನವೆದೆ
ಓಡಿ ಬಂದೆನು ಇಗೋ ಪರಿವೆ ಇರದೇ ಓಡಿ ಬರುವಂತೆ ನದಿ ಕಡಲ ಕರೆಗೆ || ಎಲ್ಲಿರುವೆ

ಭಾವಗೀತೆ ೪ - ಯಾವ ಹಾಡ ಹಾಡಲಿ

ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ ||೨||
||ಯಾವ ಹಾಡ ಹಾಡಲಿ||

ಸುತ್ತ ಮುತ್ತ ಮನೆ ಮಠಗಳು ಹೊತ್ತಿಕೊಂಡು ಉರಿಯುವಲ್ಲಿ
ಸೋತ ಮೂಕವಾದ ಬದುಕು||೨|| ನಿಟ್ಟುಸಿರೊಳು ತೇಲುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಬರೀ ಮಾತಿನ ಜಾಲದಲ್ಲಿ, ಶೋಷಣೆಗಳ ಶೂಲದಲ್ಲಿ ||೨||
ವಂಚನೆಗಳ ಸಂಚಿನಲ್ಲಿ||೨|| ಹಸಿದ ಹೊಟ್ಟೆ ನರಳುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಬೆಳಕಿಲ್ಲದ ದಾರಿಯಲ್ಲಿ, ಪಾಳು ಗುಡಿಯ ಸಾಲಿನಲ್ಲಿ ||೨||
ಬಿರುಗಾಳಿಯ ಬೀಡಿನಲ್ಲಿ ||೨|| ಕುರುಡು ಪಯಣ ಸಾಗುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ ||೨||
||ಯಾವ ಹಾಡ ಹಾಡಲಿ||

ಭಾವಗೀತೆ ೩ - ಅಳುವ kadaloLu

ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ;
ಬಾಳ ಗಂಗೆಯ ಮಹಾಪೂರದೊಳೂ
ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರ
ಳುರುಳಾಟವಲ್ಲಿ !

ಆಶೆಬೂದಿತಳದಲ್ಲು ಕೆರಳುತಿವೆ
ಕಿಡಿಗಳೆನಿತೋ ಮರಳಿ,
ಮುರಿದು ಬಿದ್ದ ಮನಮರದ ಕೊರಡೊಳೂ
ಹೂವು ಹೂವು ಅರಳಿ !
ಕೂಡಲಾರದೆದೆಯಾಳದಲ್ಲು
ಕಂಡೀತು ಏಕಸೂತ್ರ;
ಕಂಡುದುಂಟು ಬೆಸೆದೆದೆಗಳಲ್ಲೂ
ಭಿನ್ನತೆಯ ವಿಕಟಹಾಸ್ಯ !

ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ;
ಯಾರ ಲೀಲೆಗೋ ಯಾರೋ ಏನೋ ಗುರಿ
ಯಿರದೆ ಬಿಟ್ಟ ಬಾಣ !
ಇದು ಬಾಳು ನೋಡು; ಇದ ತಿಳಿದನೆಂದರೂ
ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು;
ನಿಜವು ತೋರದಲ್ಲ !

ಬೆಂಗಾಡು ನೋಡು ಇದು; ಕಾಂಬ ಬಯಲುದೊರೆ
ಗಿಲ್ಲ ಆದಿ-ಅಂತ್ಯ;
ಅದ ಕುಡಿ

ಭಾವಗೀತೆ ೨ - ಆಗು ಗೆಳೆಯ

ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾದಿ...
ಹತಾಶೆಯಲ್ಲೇನಿದೆ.... ಬರೀ ಶೂನ್ಯ.. ಬರೀ ಬೂದಿ....

ಕೊಚ್ಚಿದಷ್ಟು ಹೆಚ್ಚಿ ಬರುವ ಸೃಷ್ಟಿ ಶೀಲ ಪ್ರಕೃತಿ
ಉಬ್ಬಿಯಲ್ಲೂ ಹುಳಿ ನೀಗಿದ ಸಿಹಿ ಹಣ್ಣಿನ ಪ್ರೀತಿ
ಅದುಮಿದಷ್ಟು ಚಿಮ್ಮಿ ಬರುವ ಚೈತನ್ಯದ ಚಿಲುಮೆ
ಇಂದು ನಮ್ಮ ಯತ್ನಗಳಿಗೆ ಇದೆ ತಕ್ಕ ಪ್ರತಿಮೆ

ಜೋಪಡಿಯಲು ಜೋಗುಳ ಅಂಗಳದಲಿ ಹೂ ಹಸೆ
ಕೊಳೆಗೇರಿಯ ಕೊಚ್ಚೆಯಲ್ಲೂ ಮಗು ಗುಲಾಬಿ ನಗೆ
ಚಿಂದಿಯಲ್ಲೂ ಹಿಗ್ಗು ಹರೆಯ ನೂರು ಕನಸು ಕವಿತೆ
ಹಟ್ಟಿಯಲ್ಲೂ ಹುಟ್ಟು ಹಬ್ಬ ಮುಂಬೆಳಗಿನ ಹಣತೆ

ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೆ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ

ಭಾವಗೀತೆ 1

ಹಾಡು ಕೇಳೋದು ನನ್ನ ದಿನ ನಿತ್ಯದ ಒಂದು ಅವಿರ್ಭಗೀಯ ಅಂಗ, ಅದರಲ್ಲೂ ಭಾವಗೀತೆಗಳು... ಅದರಲ್ಲಿನ ಪ್ರತಿಯೊಂದು ಪದಕ್ಕೂ ಒತ್ತುಕೊಟ್ಟು ಕೇಳಿದರೆ ಎಲ್ಲೋ ಒಂದು ಕಡೆ ನಾವು ಅದರ ಭಾಗ ಆಗೇ ಇರ್ತೀವಿ, ಹಾಗೆ ಹಾಡುಗಳಲ್ಲಿನ ಅರ್ಥ ಹುಡುಕಿ ನಾನೆಲ್ಲಿದ್ದೇನೆ ಅಂತ ನೋಡ್ಕೊಳ್ಳೋದು ನನ್ನ ಅಭ್ಯಾಸ, ದುರದೃಷ್ಟ ಅಂದರೆ, ಎಷ್ಟೋ ಭಾವಗೀತೆಗಳಿಗೆ "lyrics" ಸಿಗೋದೆ ಕಷ್ಟ, ಹಾಗೆ ಸಿಕ್ಕಿ ಮತ್ತು ಸಿಕ್ಕಿದೆ ಇದ್ದ ಭಾವ ಗೀತೆಗಳ lyrics ಇಲ್ಲಿದೆ :)

http://bhavageethelyrics.co.nr/ - ಇನ್ನೂ ಯಾವುದಾದರೂ ಪದ್ಯ ಬೇಕಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ಸಿಕ್ಕಿದ್ದಲ್ಲಿ ಇದೆ blog ನಲ್ಲಿ update ಮಾಡುತ್ತೇನೆ