ಮಂಗಳವಾರ, ಮಾರ್ಚ್ 22, 2011

ನೀನು....

ಏನೂ ಬರೆಯಲು ತಿಳಿಯದಾಗ, ಏನೂ ಹೇಳಲೂ ತೋಚದಾಗ
ಕಣ್ಣ್ಮುಚ್ಚಿ ಕೂತೆ....
ನನ್ನಂತರಾಳದಾಲಿ ಸುಳಿದಾಡಿದ ನೀನು ಒಮ್ಮೆಲೇ ಬಂದು ನಿಂತೆ!!

ನಾಳೆ

ಮನದ ಮಾತಿದು ಯಾರಿಗೂ ತಿಳಿಸದ ಗುಟ್ಟು
ಆಸೆ ನಿರಾಸೆಗಳ ಬಿಡಾರದ ಗಂಟು

ಬೇಡವೆಂದರೂ ಬಿಡದ ನೆನಪುಗಳ ಜೋಳಿಗೆ
ಹತ್ತಿ ಕೂತು ಎಣಿಸಿದ ನಕ್ಷತ್ರಗಳ ಸುಂದರ ಮಾಳಿಗೆ

ಬೆಳಕು ಮೂಡಿ, ಹಗಲಿಡೀ ತಡಕಾಡಿ, ಇರುಳ ದೂಡಿ, ದಿನ ಕಳೆದರೂ,
ಕನಸಲ್ಲಾದರೊಮ್ಮೆ ನನ್ನ ಕಾಡಿ ಹೋಗುವ ನಿನ್ನೆಗೆ ಹೇಗೆ ತಿಳಿಸಲಿ?
ನಿನ್ನ ಬಿಟ್ಟು ಹೊಸ ಹಾದಿಯ ಹಿಡಿದಿಹೆನು, ನಾ ನಾಳೆಯ ಕಾದು ಕುಳಿತಿಹೆನು !!

ಭಾವಗೀತೆ ೬ - ಇಷ್ಟು ಕಾಲ ಒಟ್ಟಿಗಿದ್ದು

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ,
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರು ಉಳಿಯಿತೇ ಕನ್ನಡಿಯ ಪಾಲಿಗೆ || ಇಷ್ಟು ಕಾಲ ಒಟ್ಟಿಗಿದ್ದು||

ಸೋಮವಾರ, ಮಾರ್ಚ್ 21, 2011

ಭಾವಗೀತೆ ೫ - ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ

ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ
ಎಲ್ಲಿರುವೆ ಹೇಳು ನೀ ನಿಜವೇ ನೆರಳೆ

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ ||೨||
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರು ಎಸೆದ ಕೋಗಿಲೆಯ ದನಿ ಹರಳಿನಂತೆ ||೨|| ಎಲ್ಲಿರುವೆ

ನಿನಗೆಂದೇ ನೆಲಬಾನು ಕೂಗಿ ಕರೆದೆ
ಹೊಲಕಾನು ಬನವೆಲ್ಲ ತಿರುಗಿ ನವೆದೆ
ಓಡಿ ಬಂದೆನು ಇಗೋ ಪರಿವೆ ಇರದೇ ಓಡಿ ಬರುವಂತೆ ನದಿ ಕಡಲ ಕರೆಗೆ || ಎಲ್ಲಿರುವೆ

ಭಾವಗೀತೆ ೪ - ಯಾವ ಹಾಡ ಹಾಡಲಿ

ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ ||೨||
||ಯಾವ ಹಾಡ ಹಾಡಲಿ||

ಸುತ್ತ ಮುತ್ತ ಮನೆ ಮಠಗಳು ಹೊತ್ತಿಕೊಂಡು ಉರಿಯುವಲ್ಲಿ
ಸೋತ ಮೂಕವಾದ ಬದುಕು||೨|| ನಿಟ್ಟುಸಿರೊಳು ತೇಲುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಬರೀ ಮಾತಿನ ಜಾಲದಲ್ಲಿ, ಶೋಷಣೆಗಳ ಶೂಲದಲ್ಲಿ ||೨||
ವಂಚನೆಗಳ ಸಂಚಿನಲ್ಲಿ||೨|| ಹಸಿದ ಹೊಟ್ಟೆ ನರಳುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಬೆಳಕಿಲ್ಲದ ದಾರಿಯಲ್ಲಿ, ಪಾಳು ಗುಡಿಯ ಸಾಲಿನಲ್ಲಿ ||೨||
ಬಿರುಗಾಳಿಯ ಬೀಡಿನಲ್ಲಿ ||೨|| ಕುರುಡು ಪಯಣ ಸಾಗುವಲ್ಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ

ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ, ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ ||೨||
||ಯಾವ ಹಾಡ ಹಾಡಲಿ||

ಭಾವಗೀತೆ ೩ - ಅಳುವ kadaloLu

ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿದೋಣಿ;
ಬಾಳ ಗಂಗೆಯ ಮಹಾಪೂರದೊಳೂ
ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರ
ಳುರುಳಾಟವಲ್ಲಿ !

ಆಶೆಬೂದಿತಳದಲ್ಲು ಕೆರಳುತಿವೆ
ಕಿಡಿಗಳೆನಿತೋ ಮರಳಿ,
ಮುರಿದು ಬಿದ್ದ ಮನಮರದ ಕೊರಡೊಳೂ
ಹೂವು ಹೂವು ಅರಳಿ !
ಕೂಡಲಾರದೆದೆಯಾಳದಲ್ಲು
ಕಂಡೀತು ಏಕಸೂತ್ರ;
ಕಂಡುದುಂಟು ಬೆಸೆದೆದೆಗಳಲ್ಲೂ
ಭಿನ್ನತೆಯ ವಿಕಟಹಾಸ್ಯ !

ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ;
ಯಾರ ಲೀಲೆಗೋ ಯಾರೋ ಏನೋ ಗುರಿ
ಯಿರದೆ ಬಿಟ್ಟ ಬಾಣ !
ಇದು ಬಾಳು ನೋಡು; ಇದ ತಿಳಿದನೆಂದರೂ
ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು;
ನಿಜವು ತೋರದಲ್ಲ !

ಬೆಂಗಾಡು ನೋಡು ಇದು; ಕಾಂಬ ಬಯಲುದೊರೆ
ಗಿಲ್ಲ ಆದಿ-ಅಂತ್ಯ;
ಅದ ಕುಡಿ

ಭಾವಗೀತೆ ೨ - ಆಗು ಗೆಳೆಯ

ಆಗು ಗೆಳೆಯ ಆಗು ನೀನು ಭರವಸೆಯ ಪ್ರವಾದಿ...
ಹತಾಶೆಯಲ್ಲೇನಿದೆ.... ಬರೀ ಶೂನ್ಯ.. ಬರೀ ಬೂದಿ....

ಕೊಚ್ಚಿದಷ್ಟು ಹೆಚ್ಚಿ ಬರುವ ಸೃಷ್ಟಿ ಶೀಲ ಪ್ರಕೃತಿ
ಉಬ್ಬಿಯಲ್ಲೂ ಹುಳಿ ನೀಗಿದ ಸಿಹಿ ಹಣ್ಣಿನ ಪ್ರೀತಿ
ಅದುಮಿದಷ್ಟು ಚಿಮ್ಮಿ ಬರುವ ಚೈತನ್ಯದ ಚಿಲುಮೆ
ಇಂದು ನಮ್ಮ ಯತ್ನಗಳಿಗೆ ಇದೆ ತಕ್ಕ ಪ್ರತಿಮೆ

ಜೋಪಡಿಯಲು ಜೋಗುಳ ಅಂಗಳದಲಿ ಹೂ ಹಸೆ
ಕೊಳೆಗೇರಿಯ ಕೊಚ್ಚೆಯಲ್ಲೂ ಮಗು ಗುಲಾಬಿ ನಗೆ
ಚಿಂದಿಯಲ್ಲೂ ಹಿಗ್ಗು ಹರೆಯ ನೂರು ಕನಸು ಕವಿತೆ
ಹಟ್ಟಿಯಲ್ಲೂ ಹುಟ್ಟು ಹಬ್ಬ ಮುಂಬೆಳಗಿನ ಹಣತೆ

ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೆ ಇಟ್ಟಿಗೆ
ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ
ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ
ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ

ಭಾವಗೀತೆ 1

ಹಾಡು ಕೇಳೋದು ನನ್ನ ದಿನ ನಿತ್ಯದ ಒಂದು ಅವಿರ್ಭಗೀಯ ಅಂಗ, ಅದರಲ್ಲೂ ಭಾವಗೀತೆಗಳು... ಅದರಲ್ಲಿನ ಪ್ರತಿಯೊಂದು ಪದಕ್ಕೂ ಒತ್ತುಕೊಟ್ಟು ಕೇಳಿದರೆ ಎಲ್ಲೋ ಒಂದು ಕಡೆ ನಾವು ಅದರ ಭಾಗ ಆಗೇ ಇರ್ತೀವಿ, ಹಾಗೆ ಹಾಡುಗಳಲ್ಲಿನ ಅರ್ಥ ಹುಡುಕಿ ನಾನೆಲ್ಲಿದ್ದೇನೆ ಅಂತ ನೋಡ್ಕೊಳ್ಳೋದು ನನ್ನ ಅಭ್ಯಾಸ, ದುರದೃಷ್ಟ ಅಂದರೆ, ಎಷ್ಟೋ ಭಾವಗೀತೆಗಳಿಗೆ "lyrics" ಸಿಗೋದೆ ಕಷ್ಟ, ಹಾಗೆ ಸಿಕ್ಕಿ ಮತ್ತು ಸಿಕ್ಕಿದೆ ಇದ್ದ ಭಾವ ಗೀತೆಗಳ lyrics ಇಲ್ಲಿದೆ :)

http://bhavageethelyrics.co.nr/ - ಇನ್ನೂ ಯಾವುದಾದರೂ ಪದ್ಯ ಬೇಕಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ಸಿಕ್ಕಿದ್ದಲ್ಲಿ ಇದೆ blog ನಲ್ಲಿ update ಮಾಡುತ್ತೇನೆ