ಶುಕ್ರವಾರ, ಜುಲೈ 31, 2009

ಮನಸ್ಸಿಗೆ ಬಂದದ್ದು...

  1. ಮಾತಿನ ಚಾಟಿಯ ಬೀಸಿ,
    ಬರಿಯ
    ನೋಟದಲೆ ಎದೆ ಬಿರಿದು,
    ಸುಡುತಲಿಹುದು ಒಡಲ ಕಡಲು,
    ಮನೆ ಒಡಕಲು, ಮನ ಬಡಕಲು,
    ಎಲ್ಲೆಲ್ಲೂ ಇಣುಕಲು, ಕಂಡಿರುವುದೊಂದು ಸಣ್ಣ ಗಿಳಬಾಗಿಲು (ಕಿಟಕಿ),
    ಬರುವುದೇ ನಮ್ಮ ಬಾಳಲೂ ಉಜ್ಜ್ವಲ ಹಗಲು??

  2. ನಿನ್ನೀ ಒಡನಾಟ, ಸುಂದರ ನೋಟ,
    ನನ್ನ ಕಾಣ ಬಯಸುವ ತಿಣುಕಾಟ,
    ಅಗಾಗ ಮಾಡುವ ತುಂಟಾಟ,
    ಒಮ್ಮೊಮ್ಮೆ ಆಗುವುದು ಒಳ ಜಗಳದ ತಿಕ್ಕಾಟ,
    ಒಟ್ಟೊಟ್ಟಿಗೆ ಆಗುವುದು ಆಟ.. ಪಾಠ,
    ಈಗೀಗ ಕೇಳಿಸುತಿದೆ ಮನಸ್ಸಿನ ಸಣ್ಣದೊಂದು ಗುನುಗಾಟ,
    ಹೇಳುತಿದೆ ಪಿಸುಮಾತಲಿ ಎಂದೆಂದಿಗೂ ಒಂದಾಗಿರಲಿ ನಮ್ಮ ದಾರಿಯ ಓಟ

ಭಾನುವಾರ, ಜುಲೈ 19, 2009

ಪ್ರಕೃತಿಯೊಡಲಲಿ

ಮುಂಜಾನೆಯ ಈ ಸೂರ್ಯ,
ಅಚ್ಚ ಹಸುರಿನ ಕಾಡು, ಹಕ್ಕಿಗಳ ಕೂ ಕೂ
ಇವಕ್ಕಾರು ಕಲಿಸಿದರೀ ಸಂಗೀತ??

ತನ್ನಿಷ್ಟದಂತೆ ಬೆಳೆದು ನಲಿದಾಡುವ ಗಿಡ ಮರಗಳು
ನಡುವೆ ಹರಿವ ನದಿಯ ಝುಳು ಝುಳು
ಇವಕ್ಕಾರು ಕಲಿಸಿದರೀ ಸಂಗೀತ??

ಸುತ್ತುಗಟ್ಟಿ ರವಿಯ ಮರೆ ಮಾಡಿಸುವೀ ಮೋಡಗಳ ರಾಶಿ
ಬಿಟ್ಟು ಬಿಟ್ಟು ಬರುವ ವರುಣ ಧರ ಧರ
ಇವಕ್ಕಾರು ಕಲಿಸಿದರೀ ಸಂಗೀತ??

ಎಲ್ಲಿದ್ದವಿವೂ? ಎಲ್ಲಿದ್ದೆ ನಾನು?
ಇಂದು ಏಕೆ ಬಂದೆ ಎಂದರಿತೆ ನಾನೀಗ,
ಇವರೊಟ್ಟಿಗೆ ಹಾಡಲು ಕಲಿತೆ, ಇವರ ಸಂಗೀತದಲಿ ನಾ ಬೆರೆತೆ

ಮರೆತೆ ಎಲ್ಲ ಚಿಂತೆಯ ಕಂತೆ,
ಹೋದ ಜನ್ಮದಲಿ ಇಲ್ಲೇ ಹುಟ್ಟಿದ್ದೆನಂತೆ,
ಮರು ಜನ್ಮದಲ್ಲೂ ಪ್ರಕೃತಿಯೊಡಲಲಿ ಬದುಕಿ ಸಾಯುವಾಸೆಯೊಂದಿಗೆ ಹೊರಟರೂ ನಾನೇಕೆ ತಿರುಗಿ ನಿಂತೆ?

ಬಣ್ಣ ಬಣ್ಣದ ಚಿಟ್ಟೆ

ಮೊನ್ನೆ ಒಂದು ವಾರ ನಮ್ಮೂರಿಗೆ ಹೋಗಿದ್ದೆ. ಮಳೆ ಕಾಲ, ಕರಾವಳಿ ಎಷ್ಟು ಚೆಂದ? ನನ್ನ ಮನಸ್ಸೆಲ್ಲ ಅಲ್ಲೇ ಇದೆ ಈಗಲೂ... ಎಲ್ಲಿ ನೋಡಿದರೂ ಹಸಿರು, ನೀರು, ಬಣ್ಣ ಬಣ್ಣದ ಚಿಟ್ಟೆಗಳು, ಎಷ್ಟು ನೋಡಿದರೂ ಹೊಸದಾಗಿ ಕಾಣುತ್ತೆ, ಹೊಸ ಅರ್ಥ ಕೊಡತ್ತೆ, ಈ ಕಾಂಕ್ರಿಟ್ ಕಾಡಿಂದ ಆ ಹಸಿರು ಕಾಡಿಗೆ ಹೋಗಿದ್ದು ಏನೋ ಸಂತೋಷ ಕೊಟ್ಟಿದೆ.

ಬಣ್ಣದ ಚಿಟ್ಟೆಗಳನ್ನ ನೋಡಿದಾಗ ಮನಸ್ಸಿಗೆ ಹೊಳೆದದ್ದು ಇಲ್ಲಿದೆ,

ಒಂದಕ್ಕಿಂತಲೂ ಇನ್ನೊಂದು ವಿಭಿನ್ನ
ಹೊನ್ನ ಬಣ್ಣದ ರೆಕ್ಕೆಯೊಂದಿಗೆ ಓಡುವ ನಿನ್ನ
ಹಿಡಿಯಲು ಹಿಂದೆ ಬಂದೆ, ನಿನ್ನ ಕಳವಳ ನೋಡಿ ಬಿಡೋಣವೆನಿಸಿತು ಮತ್ತದೇ ಬಾನಿಗೆ
ಇನ್ನೊಮ್ಮೆ ಬರುವೆ, ಗುರುತು ಹಿಡಿಯುವೆಯ ನನ್ನ??