ಶುಕ್ರವಾರ, ಮೇ 6, 2011

ಮಕ್ಳು ಯಾಕೆ ಬೇಕು?

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ.... ಇದೇನು... ಯಾವ್ದೋ ಹಾಡೋ ಎಲ್ಲೋ ಅಂತ ಯೋಚನೆನ?? ಆ ಒಂದು ಸಾಲು ಮಾತ್ರ ಈಗ ಇಲ್ಲಿಗೆ ಅನ್ವಯಿಸುತ್ತೆ... ಹೀಗೆ ನನ್ನ ಸ್ನೇಹಿತರೊಬ್ಬರ ಹತ್ರ ಮಾತಾಡೋವಾಗ ಈ ವಿಚಾರ ತಲೆಗೆ ಬಂತು ನೋಡಿ... ತಲೆಗೆ ಬಂದಿದ್ದನ್ನ ಬರೀಬೇಕಲ್ವಾ?? ಅದ್ಕೆ... ನಿಮ್ ತಲೆಗೂ ಸ್ವಲ್ಪ ಹುಳ ಬಿಡೋಣ ಅಂತ... ಈಗ ನನ್ ತಲೆಗೆ ಬಂದಿದ್ದು ಏನು ಅಂದ್ರೆ... ಮಕ್ಳು ಯಾಕೆ ಬೇಕು??? ದೇವ್ರು ಕೊಡ್ತಾನೆ ಅದ್ಕೆ... ಅಂತ ಅಂದ್ರು ಇನ್ನೊಬ್ರು ಯಾರೋ... ಅವ್ರು ಇವ್ರು ಹೇಳಿದ್ದಲ್ಲ... ನಮಗೇನು ಅನ್ಸತ್ತೆ ಅನ್ನೋದು ಮುಖ್ಯ ಅಲ್ವಾ?? ಅದ್ಕೆ ಸ್ವಲ್ಪ ವಿಚಾರ ಮಂಥನ ಮಾಡೋಣ ಬನ್ನಿ...

ನಮಗೆ ನಿಮಗೆ...
ಯಾರಿಗೆ ಆಗ್ಲಿ ಮದುವೆ ಆಗಿ ೨ ತಿಂಗಳ ಮೇಲೆ ಎಲ್ಲಿ ಹೋದರು ಆಗೋ ಅನುಭವಗಳಲ್ಲಿ ಒಂದು... "ಏನು ವಿಶೇಷ ಇಲ್ವಾ" ಅಂತ ಜನ ಕೇಳೋದು.. ಬೇರೆ ಯಾರೋ ಯಾಕೆ.. ನಾನೇ.. ನನ್ನ ಬಿಟ್ಟು ಬೇರೆ ಎಲ್ರುನ್ನು ಕೇಳ್ತೀನಿ... ಯಾಕೆ ಮಕ್ಕಳಿಗೆ ಇಷ್ಟು ಪ್ರಾಮುಖ್ಯತೆ?? ಯೋಚಿಸ್ತಾ ಹೋದ್ರೆ ಎಷ್ಟೋ ವಿಚಾರ ತಲೆಗೆ ಬರ್ತಾ ಹೋಗತ್ತೆ...

ಮದುವೆ ಆಗೋದು ಹೆಚ್ಚಿನಂಶ ಬೇರೆಯೋರಿಗೊಸ್ಕರಾನೆ ಅನ್ನೋದು ನನ್ನ ಹಲವಾರು ಅಭಿಪ್ರಾಯಗಳಲ್ಲಿ ಒಂದು... ಕೆಲವರು ಮಾತ್ರ ಅವರಿಗಾಗಿ ಮದುವೆ ಆಗ್ತಾರೆ... ಇದ್ರಲ್ಲಿ ಅನಿವಾರ್ಯತೆಗಳಿಂದ ಮದ್ವೆ ಆಗೋರು ಇದಾರೆ.. ಅದೆಲ್ಲ out of topic ಬಿಡಿ.. general ಆಗಿ ಏನಾಗುತ್ತೆ ಅನ್ನೋದರ ಬಗ್ಗೆ ಮಾತಾಡೋಣ... ಯಾರೋ ಹೊರಗಿನೋರು ಮನೇಲಿ ಕೇಳ್ತಾರೆ.."ಏನ್ರಿ ನಿಮ್ ಮಗಳ ಮದ್ವೆ ಯಾವಾಗ ಮಾಡ್ತೀರ" ಅಪ್ಪ ಅಮ್ಮಂಗೆ ಅಷ್ಟು ಕೇಳಿದ್ದೆ ತಡ... ಇಷ್ಟ ಇದ್ರೂ.. ಇಲ್ದೆ ಇದ್ರೂ... ಮದುವೆಗೆ ಗಂಡು ಹುಡುಕಲಿಕ್ಕೆ ಶುರು ಮಾಡೇ ಬಿಡ್ತಾರೆ... ಸರಿಯಾದ ಗಂಡು ಸಿಕ್ತಾನೆ... ಸಾಲಾನೋ ಸೋಲಾನೋ ಮಾಡಿ (ಮೊದಲೆಲ್ಲ ಹುಡುಗಿ ಅಪ್ಪ ಸಾಲ ಮಾಡ್ತಾ ಇದ್ರೂ.. ಈಗ ಹುಡ್ಗ ಕೂಡ ಸಾಲ ಮಾಡ್ಕೋತಾನೆ ಮದ್ವೆ ಮನೆ ಅಂತ ಖರ್ಚು ಅವನಿಗೂ ಇರತ್ತಲ್ಲ )... ಹೀಗೆ ಊರೊರ್ನೆಲ್ಲ ಕರ್ದು ಮದುವೇನು ಮಾಡ್ತಾರೆ..... ಆಮೇಲೆ ಎರಡೇ ತಿಂಗಳು... ಆ ಹುಡುಗ ಹುಡುಗಿ ಹೇಗೋ ಕಷ್ಟ ಪಟ್ಟು.. ಒಬ್ರನ್ನೋಬ್ರನ್ನ ಅರ್ಥ ಮಾಡ್ಕೊಂಡು ಸಂಸಾರದಲ್ಲಿ ಸರಸ ವಿರಸಗಳನ್ನ ನೋಡಕ್ಕೆ ಶುರು ಮಾಡ್ತಾರೋ ಇಲ್ವೋ... ಮತ್ತೆ ಊರೋರ entry ಶುರು "ಏನ್ರಿ ನಿಮ್ ಮಗಳು ಏನಾದ್ರೂ ವಿಶೇಷಾನ??", "ಏನ್ರಿ ನಿಮ್ ಸೊಸೆ ಏನಾದ್ರೂ ವಾಂತಿ ಮಾಡ್ಕೊಂಡ್ಲ". ಯಾಕಪ್ಪ ಬೇಕು ಇವರಿಗೆ?? ಸುಮ್ನೆ ಇರೋ ಅಪ್ಪ ಅಮ್ಮ ಕೂಡ ಕೇಳೋ ಹಾಗೆ ಮಾಡ್ತಾರೆ... ಮೊದ್ಲೇ ಎಲ್ಲ ಕಡೆಗಳಿಂದ ಸಾಲ ಮಾಡಿರ್ತಾರೆ... ಮತ್ತೆ ಖರ್ಚು.. ಇನ್ನೊಂದ್ ಸ್ವಲ್ಪ ದಿನ ಹೋಗ್ಲಿ... ಏನು ಇಲ್ಲ.... ಸುಮ್ನೆ ಕೇಳೋದು... ಪಾಪ ಅದ್ಕೆ ಅವ್ರು ಹೆದ್ರುಕೊಂಡು ಸಂಸಾರದಲ್ಲಿ ಸಾರ ಇದೆ ಅಂತ ತಿಳ್ಕೊಳ್ಳೋಕೆ ಮುಂಚೆನೇ ಅಪ್ಪ ಅಮ್ಮನು ಆಗ್ತಾರೆ... ಮಕ್ಕಳನ್ನ ಕಷ್ಟ ಪಟ್ಟು ಸಾಕಿ ಸಲಹಿ... ಕೊನೆಗೆ ಅವ್ರ ಬಾಳ ತುಂಬಾ ಮಕ್ಳೆ ತುಂಬಿರ್ತಾರೆ... ಯಾಕೆ ಅವ್ರು ಮಕ್ಳು ಮಾಡ್ಕೊಂಡ್ರು ಅಂತ ಅವ್ರಿಗೆ ಅರಿವಿಗೆ ಬರಲ್ಲ... ಪಾಪಾ....

ಹೀಗೆ ಮೇಲೆ ಹೇಳಿದ ಮಾತೆಲ್ಲ ತಮಾಷೆಗಾಗಿ ಅಷ್ಟೇ... ಇದು ಎಷ್ಟೋ ಮನೆಗಳಲ್ಲಿ ನಡಿಯುತ್ತೆ ಕೂಡ... ಆದ್ರೆ ಅಲ್ಲಲ್ಲಿ ಕೆಲವು ಬದಲಾವಣೆಗಳು ಇರತ್ತೆ... ಅದೆಲ್ಲ ಪಕ್ಕಕ್ಕೆ ಇಡೋಣ... ಈಗ ನನ್ನ ಈ ವಿಚಾರ ಮಂಥನದ ತಲೆ ಬರಹದ(headline ) ಬಗ್ಗೆ ಸ್ವಲ್ಪ serious ಆಗಿ ಯೋಚನೆ ಮಾಡೋಣ.. ಯಾಕೆ ನಮಗೆ ಮಕ್ಳು ಬೇಕು??... ನಮ್ಮ ಹೀರಿಯೋರನ್ನ ಕೇಳಿದ್ರೆ ಹೇಳ್ತಾರೆ... ವಂಶ ಬೆಳೆಸೋಕ್ಕೆ.. ನಾಳೆ ನಮ್ಮ ಹೆಸರನ್ನ ಹೇಳೋಕ್ಕೆ ಒಂದು ಬೇಕು ಕಣೆ... ೧ ವರ್ಷ ೨ ವರ್ಷಾ ಆದರು ಮಕ್ಕಳು ಆಗ್ಲಿಲ್ಲ ಅಂದ್ರೆ.. ಆಗೇನು ಮಾಡ್ತೀಯ.. ಇನ್ನೂ ಹಲವಾರು ಉತ್ತರ ಕೊಟ್ಟು.. ಈಗಿನ ಕಾಲದೊರಿಗೆ ಮಕ್ಳೆ ಬೇಡವಂತೆ... ನಮಗೊಂದು ಮೊಮ್ಮಗು ಬೇಡ್ವ... ಇನ್ನೂ ಏನೇನೋ... ಆದ್ರೆ ಆ ಉತ್ತರ ನಂಗೆ ಅಷ್ಟು ಸರಿ ಅನ್ನಿಸಲಿಲ್ಲ... ನಿಜ.. ಅವ್ರಿಗೆ ಮೊಮ್ಮಗು ಬೇಕು.. ಅವ್ರಿಗೆ ನಾವು ಖುಷಿ ಕೊಡ್ಬೇಕು... ಆದ್ರೆ ಅದಕ್ಕೆ.. ನಾವು ಮದುವೆಯ ರೀತಿ ನೀತಿ.. ಒಬ್ಬ್ರಿಗೊಬ್ರು ಅನುಸರಣೆ ಮಾಡಿ ಹೇಗೆ ಜೀವನಾನ ಸರಿಯಾಗಿ ನಡೆಸಿಕೊಳ್ಳೋದು ಅಂತ ತಿಳ್ಕೊಳ್ಳೋಕೆ ಮುಂಚೆನೇ ಮಕ್ಳು ಬೇಕಾ??

ಈಗಿನ ಹುಡ್ಗೀರು house wife ಆಗಿ ಇರೋದು ತುಂಬಾ ಕಡಿಮೆ.. ಅಷ್ಟು ಓದಿ.. ಒಳ್ಳೆ ಕಂಪನಿಲಿ ಕೆಲಸ ಮಾಡ್ತಾ.. ತನ್ನ ಕಾಲ ಮೇಲೆ ತಾನು ನಿಲ್ಲೋ ತವಕದಲ್ಲಿ.. ಮನೆ ಕೆಲಸ ಕಲಿತವರು ಕಡ್ಮೆನೆ... ಮದುವೆ ಆದ ಮೇಲೆ ಹೇಗೂ ಮಾಡಬೇಕಲ್ಲ ಅಂತ ಮನೇಲೂ ಅಷ್ಟು ಬಲವಂತ ಮಾಡಿರಲ್ಲ.. ಹೀಗಿರೋವಾಗ ಅವಳಿಗೆ ಮನೆ ಕೆಲಸ ಅಡುಗೆ ಎಲ್ಲ ಕಲ್ತು office ಗೆ ಕೂಡ ಹೋಗಿ, ಗಂಡನ ಬೇಕು ಬೆದಗಲೇನು ಅಂತ ತಿಳ್ಕೊಂಡು. ಇದೆಲ್ಲ ಕಲಿಯೊಕ್ಕೆ ೧ ವರ್ಷ ಕಾಲ ಬೇಕು... house wife ಆಗಿರೋರಿಗೂ ಇದೆ ಅನ್ವಯಿಸುತ್ತೆ... office ಗೆ ಹೋಗೋದು ಒಂದಿರಲ್ಲ... ಆದರೂ ಮನೆ ಕೆಲಸ ಮಾಡೋದು ಅಷ್ಟೇನೂ ಸುಲಭ ಅಲ್ಲ.. (ಅಮ್ಮನ್ದ್ರು ಮಾಡೋವಾಗ ಗೊತ್ತಾಗ್ತಾ ಇರೋಲ್ಲ) . ಹೀಗೆ ಹತ್ತು ಹಲವು ನಿಭಾಯಿಸೋದು ಕಲಿಯೊಕ್ಕೆಇಡೀ ಹಿಡಿಯುತ್ತೆ.... minimum grace time .. ಒಂದು ವರ್ಷ ಅಂತ ಇಟ್ಕೊಳ್ಳೋಣ... ಅಷ್ಟರಲ್ಲಿ ಮಕ್ಳು ಆಗೋದ್ರೆ.. ಇದೆ ಗೊತ್ತಿಲ್ದೆ ಇರೋರು ಇನ್ನೂ ಮಗುನ ನೋಡ್ಕೊಳ್ಳೋದು ಇನ್ನೂ ಕಷ್ಟ ಆಗಲ್ವಾ?? ಅದು ದೊಡ್ದದಾ ಮೇಲೆ ಸಾಕೋದು ಸಲಹೋದು ಪಕ್ಕಕ್ಕಿಡೋಣ ತಮ್ಮ ವಯ್ಯಕ್ತಿಕ ಬೆಳವಣಿಗೆ ಬೆಳೆಸಿಕೊಳ್ಳದೆ ಮಗುಗೆ ಉತ್ತಮ ಆಹಾರ ಯಾವ್ದು.. ಏನು ಮಾಡಿದ್ರೆ ನನ್ನ ಮಗು ಖುಷಿಯಾಗಿರತ್ತೆ ಅಂತ ಯೋಚಿಸೋಕೆ.. ಮನೆಯ ಬೇರೆ ಯೋಚನೆಗಳು ಇರಬಾರದಲ್ವೆ?? ಸಾರು ಮಾಡೋಕೆ ಬರ್ದೇ ಸಾಂಬಾರು ಕಲಿಯೋದು ಹೇಗೆ??

ಈ ಮೇಲಿನದ್ದೆಲ್ಲ ಒಂದು ಕೋನದ ವಿಚಾರ... ಸರಿ ಒಂದೆರಡು ವರ್ಷ ಮಕ್ಳು ಆಗ್ಲಿಲ್ಲ ಅಂದ್ರೆ.. ಆಗಂತೂ ಇನ್ನೂ ಸರಿ... ಮತ್ತೆ ಬೇರೆಯೋರ entry .. ಯಾಕೆ ಏನಾಯ್ತು... ಈ doctor ಹತ್ರ ಹೋಗಿ.. ಆ ಮದ್ದು ಮಾಡ್ಸಿ... ಆ ದೇವರಿಗೆ ಹರಕೆ ಹೊತ್ತ್ಕೊಳ್ಳಿ...ಬಿತ್ತಿ ಸಲಹೆಗಳ ಮಹಾ ಪೂರಣೆ ಬರತ್ತೆ.... ಮಕ್ಳು ಆಗಿಲ್ಲ ಅನ್ನೋ ಚಿಂತೇನೆ ಅವರನ್ನ ತಿಂತಾ ಇರತ್ತೆ... ಮಧ್ಯದಲ್ಲಿ ಈ ಮಾತುಗಳು.. ಅವರನ್ನ ಕುಗ್ಗಿಸಿ ನಮ್ಮಲ್ಲೇನೋ ದೋಷ ಇದೆ ಅಂತ ಅವರನ್ನ ಇನ್ನೂ ಖಿನ್ನಿಸುತ್ತೆ..(ಹಲವಾರು ಸಂಶೋಧನೆ ಪ್ರಕಾರ ಹೀಗೆ ಮಾನಸಿಕವಾಗಿ ಕುಗ್ಗಿದಷ್ಟು ಮಕ್ಕಳು ಆಗೋ ಸಾಧ್ಯತೆ ಕೂಡ ಕಡಿಮೆ ಆಗ್ತಾ ಹೋಗತ್ತಂತೆ) ಇಲ್ಲೂ ಕೂಡ ನಮಗೂ ಮಕ್ಕಳು ಆಗತ್ತೆ ಅಂತ ತೋರ್ಸೋಕೆ ಮಕ್ಕಳು ಬೇಕು... ನಂಗಂತೂ ಸರಿಯಾದ ಉತ್ತರ ಸಿಗ್ಲಿಲ್ಲ...

ಸ್ವಲ್ಪ ಕಾವ್ಯಮಯ ರೀತಿಯಲ್ಲಿ ಯೋಚಿಸಿದರೆ...

ನಲ್ಲ ನಲ್ಲೆಯ ಮಿಲನ ಮಹೋತ್ಸವದ ಗುರುತಾಗಿ ಸಿಕ್ಕ ಉಡುಗೊರೆ...
ಬಾಳಾ ಬೆಳಗುವ ದೀಪಿಕೆಯು ಮಡಿಲಲ್ಲಿ ನಗುವಾಗ,
ಅದರ ಧರೆಗಿಳಿಸಲು ತಾ ಪಟ್ಟ ಕಷ್ಟಗಳ ಅಲ್ಲಗೆಳೆದು
ಅದರ ನಗುವಲ್ಲಿ ನಗುವಾಗಿ
ಬದುಕಿನ ಸಾರ್ಥಕತೆಯ ಭಾವದಲಿ ನಲಿಯುವಳು ತಾಯಿ...

ಮುಡಿಗೊಂದು ಹೂವು ಮನೆಗೊಂದು ಮಗುವು..
ತಮ್ಮ ನಗುವ ಕಂಪನು ಸೂಸಿ
ನಾಲ್ಕು ಗೋಡೆಗಳ ಮನೆಯಾಗಿ ಮಾಡಿ...
ಅಂಗಳದ ತುಂಬೆಲ್ಲ ಆಟವಾಡು ಬಾ ಓ ಮುದ್ದು ಕಂದ

ಹೀಗೆ ಏನೇನೋ ಹೇಳಬಹುದು...

ಏನೇ ಆಗಲಿ.. ಆಗಿರಲಿ... ನನಗೆ ಅನ್ನಿಸೋದು... ಮಕ್ಕಳು ಬೇಕು... ಹುಡುಗ ಹುಡುಗಿ... ನಿಜವಾದ ಅರ್ಥದಲ್ಲಿ ಗಂಡ ಹೆಂಡತಿ ಆದಮೇಲೆ... ಹುಡುಗ ಗೆಳೆಯನಂತ ಗಂಡ ಆದಮೇಲೆ... ಹುಡುಗಿ ಗೆಳತಿಯಂಥ ತಾಯಿಯಂಥ ಹೆಂಡತಿಯಾದ ಮೇಲೆ... ಸಂಸರಾ ಪೂರ್ತಿಯಾಗಿಸಲು....ನಮ್ಮ ಹೆಸರನ್ನು ಹೇಳಲು.. ನಮ್ಮ ಅಪ್ಪ ಅಮ್ಮನನ್ನು ಅಜ್ಜ ಅಜ್ಜಿ ಆಗಿ promote ಮಾಡಲು...ದಿನಕ್ಕೊಂದು ಹೊಸ ಕಥೆ.. ಹೊಸ ಆಟ ಹುಡುಕಿ ಆಡಿ ನಮ್ಮನ್ನು ಮಕ್ಕಳನ್ನಾಗಿಸಿ..ಮುದ್ದು ಮುದ್ದು ಮಾತನಾಡಿ... ನಕ್ಕು ನಗಿಸಿ... ಈ ಚಕ್ರ ಹೀಗೆ ಸಾಗಲು... ಬದುಕಿನ ಸಾರ್ಥಕತೆಗೆ... ನಮ್ಮಿಂದ ಇನ್ನೊಂದು ಜೀವ ಬಂದು ಬೆಳೆದು ಜೀವಕ್ಕೆ ಜೀವವಾಗುವ ಭಾವವ ನಮ್ಮಲ್ಲಿ ಮೂಡಿಸಲು... ಪ್ರೀತಿ ಎಂಬ ಭಾವನೆಯ ಹಂಚಿ ಹೆಚ್ಚಿಸಲು...ಅಪ್ಪ ಅಮ್ಮ ಅನ್ನಿಸಿಕೊಳ್ಳುವ ಭಾವಕ್ಕೆ ಮಕ್ಕಳು ಬೇಕು... ಏನಂತೀರ???

2 ಕಾಮೆಂಟ್‌ಗಳು: